ಕೊಲ್ಲಂ (ಕೇರಳ): ಕೇರಳದ ಕೊಲ್ಲಂನಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಒಳ ಉಡುಪು ತೆಗೆಸಲಾಗಿದೆ ಎಂಬ ಆರೋಪ ಪ್ರಕರಣ ಈಗ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ ಬಗ್ಗೆ ವಿದ್ಯಾರ್ಥಿನಿಯೊಬ್ಬರು 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ್ದಾರೆ.
ಭಾನುವಾರ ನಡೆದ ನೀಟ್ ಪರೀಕ್ಷೆ ವೇಳೆ ಕೊಲ್ಲಂನ ಪರೀಕ್ಷಾ ಕೇಂದ್ರವೊಂದರಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದಿದೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ ನಂತರ ಭಾರಿ ವಿವಾದಕ್ಕೂ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಇತ್ತ, ಈ ಕುರಿತು ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಜೊತೆಗೆ ಒಳ ಉಡುಪುಗಳ ತೆಗೆಸಿ ತಪಾಸಣೆ ನಡೆಸುವುದಕ್ಕೆ ಅವಕಾಶ ಇಲ್ಲ ಹಾಗೂ ಯಾವುದೇ ಡ್ರೆಸ್ ಕೋಡ್ ಸಹ ವಿಧಿಸಿಲ್ಲ ಎಂದೂ ಎನ್ಟಿಎ ಸ್ಪಷ್ಟಪಡಿಸಿದೆ.
ನೀಟ್ ಪರೀಕ್ಷಾ ಕೇಂದ್ರದಲ್ಲಿ ಒಳ ಉಡುಪು ತೆಗೆಸಿದ ಆರೋಪ: ಕೇರಳದ ವಿದ್ಯಾರ್ಥಿನಿ ಹೇಳುವುದೇನು? ವಿದ್ಯಾರ್ಥಿನಿ ಹೇಳುವುದೇನು?: ಪರೀಕ್ಷಾ ಕೇಂದ್ರ ತಲುಪಿದಾಗ ಹುಡುಗಿಯರಿಗೆ ಎರಡು ಸಾಲುಗಳು ಇದ್ದವು. ಲೋಹದ ಹೂಕ್ಸ್ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ ಅಥವಾ ಇಲ್ಲವೇ ಎಂದು ಕೇಳಲಾಯಿತು. ಹೂಕ್ಸ್ ಇರುವ ಉಡುಪು ಎಂದಾಗ ಬೇರೆ ಸಾಲಿಗೆ ಕಳುಹಿಸಲಾಯಿತು. ಆಗ ಇಲ್ಲಿ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ ಎಂದು ವಿದ್ಯಾರ್ಥಿನಿ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಇದನ್ನೂ ಓದಿ:ನೀಟ್ ಪರೀಕ್ಷೆ ವೇಳೆ ಒಳಉಡುಪು ಬಿಚ್ಚುವಂತೆ ಸೂಚನೆ ಆರೋಪ.. ನ್ಯಾಟ್ ಸ್ಪಷ್ಟನೆ ಹೀಗಿದೆ
ಕೊಠಡಿಯೊಂದರ ಮುಂದೆ ನಿಂತಿದ್ದ ಸಾಲಿಗೆ ಹೋದಾಗ ಪರೀಕ್ಷಾ ಹಾಲ್ಗೆ ಪ್ರವೇಶಿಸುವ ಮುನ್ನ ಸಾಮಾನ್ಯವಾಗಿ ಮಾಡುವ ತಾಪಸಣೆ ಎಂದು ಭಾವಿಸಿದೆವು. ಆದರೆ, ಕೊಠಡಿಯೊಳಗೆ ಹೋದ ಬಳಿಕ ಅಲ್ಲಿನ ಮಹಿಳಾ ಸಿಬ್ಬಂದಿ ಒಳ ಉಡುಪುಗಳನ್ನು ತೆಗೆಯಲು ಸೂಚಿಸಿದರು. ಅಲ್ಲದೇ, ಅವುಗಳನ್ನು ಡ್ರಾದಲ್ಲಿ ಇರಿಸುವಂತೆ ಹೇಳಿದರು. ನಂತರ ಪರೀಕ್ಷಾ ಹಾಲ್ಗೆ ಹೋದಾಗ ಹುಡುಗ ಮತ್ತು ಹುಡುಗಿಯರು ಒಟ್ಟಿಗೆ ಕುಳಿತು ಕೊಳ್ಳುವಂತಿತ್ತು. ಹೀಗಾಗಿ ಕೂದಲನ್ನು ಮುಂದಕ್ಕೆ ಹಾಕೊಳ್ಳುವ ಮೂಲಕ ನಮ್ಮ ಮುಂಭಾಗ ಮುಚ್ಚಿಕೊಳ್ಳಬೇಕಾಗಿತ್ತು. ಇದು ನಮ್ಮ ಪಾಲಿಗೆ ತುಂಬಾ ಮುಜುಗರದ ಸಂಗತಿಯಾಗಿತ್ತು. ನಾವು ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಹ ಸಾಧ್ಯವಾಗಲಿಲ್ಲ ಎಂದು ವಿವರಿಸಿದಳು.
ಇದನ್ನೂ ಓದಿ:ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿದವರ ವಿರುದ್ಧ ಪ್ರಕರಣ ದಾಖಲು
ಇಷ್ಟೇ ಅಲ್ಲ, ಪರೀಕ್ಷೆ ಮುಗಿಸಿ ತಪಾಸಣಾ ಕೊಠಡಿಗೆ ಹಿಂತಿರುಗಿದಾಗ ಅಲ್ಲಿದ್ದ ಸಿಬ್ಬಂದಿ ಒಳ ಉಡುಪು ಧರಿಸದೆ ಜೊತೆಯಲ್ಲಿ ತೆಗೆದುಕೊಂಡು ಹೋಗುವಂತೆಯೂ ಹೇಳಿದರು. ಇದರಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ನಾಚಿಕೆಪಡುವಂತೆ ಆಗಿದೆ. ಪರೀಕ್ಷಾ ಕೇಂದ್ರದಲ್ಲೇ ಹುಡುಗಿಯೊಬ್ಬಳು ಕಣ್ಣೀರು ಸಹ ಹಾಕುವಂತೆ ಆಯಿತು. ಅಧಿಕಾರಿಗಳ ನಿರ್ದೇಶನದ ಹೊರತಾಗಿ ತೆಗೆದ ಒಳ ಉಡುಪುಗಳನ್ನು ಧರಿಸಲು ಅವಕಾಶ ಇರಲಿಲ್ಲ ಎಂದು ಅಲವತ್ತುಕೊಂಡರು.
ಇದನ್ನೂ ಓದಿ:NEET ಪರೀಕ್ಷೆ ವೇಳೆ ಕೆಲವೆಡೆ ಹಿಜಾಬ್ ವಿವಾದ: ಕೇರಳದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿದ ಗಂಭೀರ ಆರೋಪ