ಈ ವರ್ಷ ದೇಶದ ಒಂಬತ್ತು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದೆ. ಈ ಚುನಾವಣೆಯನ್ನು ಲೋಕಸಭೆ ಸಮರಕ್ಕೆ ದಿಕ್ಸೂಚಿ ಎಂದೇ ರಾಜಕೀಯ ವಿಶ್ಲೇಷಕರು ಪರಿಗಣಿಸಿದ್ದಾರೆ.
ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ಫೆಬ್ರವರಿ-ಮಾರ್ಚ್ನಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ನಲ್ಲಿ ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಹಾಗು ಜಮ್ಮು ಕಾಶ್ಮೀರದಲ್ಲಿಯೂ 'ವಿಧಾನ ಕದನ' ನಡೆಯಲಿದೆ.
ತ್ರಿಪುರ:ಈಶಾನ್ಯ ಭಾಗದಲ್ಲಿರುವ ಪುಟ್ಟರಾಜ್ಯ ತ್ರಿಪುರಾದಲ್ಲಿ 2018 ರಲ್ಲಿ ಬಿಜೆಪಿ 35 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತ್ತು. ಈ ಮೂಲಕ ಸುಮಾರು ಎರಡು ದಶಕಗಳ ಕಾಲ ರಾಜ್ಯ ಆಳಿದ ಸಿಪಿಐ(ಎಂ) ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದಿತ್ತು. ಡಾ.ಮಾಣಿಕ್ ಸಹಾ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ರಾಜ್ಯದ ಬಿಜೆಪಿ ಘಟಕದಲ್ಲಿ ಒಳಜಗಳಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ಕರ್ನಾಟಕ ಚುನಾವಣೆಯತ್ತ ಮೋದಿ - ಶಾ ಚಿತ್ತ.. ಕಾಂಗ್ರೆಸ್, ಜೆಡಿಎಸ್ ಮತ ಬ್ಯಾಂಕ್ಗಳೇ ಟಾರ್ಗೆಟ್
ಈ ಸಲದ ಚುನಾವಣೆಯಲ್ಲಿ ತ್ರಿಪುರ ಮೋಥಾ ಪಕ್ಷವು ಬಿಜೆಪಿಯನ್ನು ಎದುರಿಸುವ ನಿರೀಕ್ಷೆ ಇದೆ. ಹಂಗ್ಶಾ ಕುಮಾರ್ ಅವರು 6000 ಬುಡಕಟ್ಟು ಬೆಂಬಲಿಗರೊಂದಿಗೆ ತ್ರಿಪುರ ಮೋಥಾ ಪಕ್ಷ ಕಟ್ಟಿದ್ದಾರೆ. ಬುಡಕಟ್ಟು ಸಂಘಟನೆ ರಚನೆಯಾದ ಕೇವಲ ಎರಡು ತಿಂಗಳಲ್ಲಿ ಅಂದರೆ ಕಳೆದ ಏಪ್ರಿಲ್‌ನಲ್ಲಿ ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿ (TTAADC) ಚುನಾವಣೆಯಲ್ಲಿ ಗೆದ್ದಿದೆ.
ಮೇಘಾಲಯ: ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎಸ್ಪಿಪಿ) ಜೊತೆ ಬಿಜೆಪಿ ತನ್ನ ಮೈತ್ರಿಯನ್ನು ಭದ್ರಪಡಿಸಲು ಹವಣಿಸುತ್ತಿದೆ. ಕಳೆದ ತಿಂಗಳು ಇಬ್ಬರು ಎನ್ಪಿಪಿ ಶಾಸಕರು ಬಿಜೆಪಿ ಸೇರಿದಾಗ ಉಭಯ ಪಕ್ಷಗಳ ನಡುವೆ ಜಗಳ ಆರಂಭವಾಗಿತ್ತು. ಮೇಘಾಲಯದ 60 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಪಡೆದುಕೊಂಡ ಬಳಿಕ ಬಿಜೆಪಿ ಎನ್ಪಿಪಿಯೊಂದಿಗೆ ಸೇರಿಕೊಂಡು ಮೇಘಾಲಯದಲ್ಲಿ ಸರ್ಕಾರ ರಚಿಸಿತು.
ನಾಗಾಲ್ಯಾಂಡ್: ಇಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಯೊಂದಿಗೆ ಬಿಜೆಪಿಯ ಮೈತ್ರಿ ಸರ್ಕಾರವಿದೆ. ಆದರೆ ರಾಜ್ಯದಿಂದ ಬೇರ್ಪಟ್ಟು ಪ್ರತ್ಯೇಕ 'ಗಡಿನಾಡು ನಾಗಾಲ್ಯಾಂಡ್' ರಾಜ್ಯ ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ನಾಯಕರು ಮನವಿ ಸಲ್ಲಿಸಿದ್ದಾರೆ. ಈ ವಿಷಯವಾಗಿ ನಾಗಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ರಾಜ್ಯತ್ವ ಬೇಡಿಕೆ ತಪ್ಪಲ್ಲ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ 2023 ರ ವಿಧಾನಸಭಾ ಚುನಾವಣೆ ನಡೆಯಲಿದೆ.
ಮಿಜೋರಾಂ: ರಾಜ್ಯದಲ್ಲಿ ಬಿಜೆಪಿ ಮತ್ತು ಮಿಜೋ ನ್ಯಾಷನಲ್ ಫ್ರಂಟ್(ಎಂಎನ್‌ಎಫ್) ಮೈತ್ರಿ ಸರ್ಕಾರವಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಅದನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಎಂಎನ್‌ಎಫ್ ಅಧಿಕಾರಕ್ಕೆ ಬರಲು ನೋಡುತ್ತಿದೆ.