ಗುವಾಹಟಿ (ಅಸ್ಸಾಂ):ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ಗಳು ಸಮೀಕ್ಷೆ ನಡೆಸಿದ್ದು ನಿನ್ನೆಯೇ ಭವಿಷ್ಯ ಹೇಳಿವೆ. ಈ ಪ್ರಕಾರ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಆದರೆ, ಮೇಘಾಲಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಕುರಿತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾಧ್ಯಮದವರೊಂದಿಗೆ ಮಾತನಾಡಿದರು.
ಎನ್‌ಡಿಎ ಪಾಲುದಾರರು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಲ್ಲಿಯೂ ಅತಂತ್ರ ವಿಧಾನಸಭೆ ನಿರ್ಮಾಣವಾಗದು. ಎನ್‌ಡಿಎ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತ್ರಿಪುರಾದಲ್ಲಿ ಬಿಜೆಪಿ ಅಭ್ಯರ್ಥಿಯೇ ಸಿಎಂ ಆಗಿರುತ್ತಾರೆ. ನಾಗಾಲ್ಯಾಂಡ್‌ನಲ್ಲಿ ಯಥಾಸ್ಥಿತಿ ಇರಲಿದೆ. ಮೇಘಾಲಯದಲ್ಲಿ ಬಿಜೆಪಿ ಗೆದ್ದಿರುವ ವಿಧಾನಸಭೆ ಸೀಟ್ಗಳನ್ನು ಪರಿಗಣಿಸಿ ಸಿಎಂ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಇಡಿಎ)ಸಂಚಾಲಕರೂ ಆಗಿರುವ ಶರ್ಮಾ ಹೇಳಿದರು.
ಫೆಬ್ರವರಿ 16 ರಂದು ತ್ರಿಪುರಾ ಮತ್ತು ಫೆಬ್ರವರಿ 27 ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಚುನಾವಣೆಗಳು ನಡೆದಿವೆ. ಮಾರ್ಚ್ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಎಕ್ಸಿಟ್ ಪೋಲ್ ಭವಿಷ್ಯ:'ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ' ಎಕ್ಸಿಟ್ ಪೋಲ್ ಪ್ರಕಾರ, 60 ಸ್ಥಾನಗಳ ತ್ರಿಪುರಾ ವಿಧಾನಸಭೆಯಲ್ಲಿ ಬಿಜೆಪಿ 36ರಿಂದ 45 ಸ್ಥಾನಗಳನ್ನು ಗೆಲ್ಲುತ್ತದೆ. ಜೀ ನ್ಯೂಸ್ ಮ್ಯಾಟ್ರಿಸ್ ಈ ಸಂಖ್ಯೆಯನ್ನು 29 ಮತ್ತು 36 ರ ನಡುವೆ ಇರಿಸಿದೆ. ಟೈಮ್ಸ್ ನೌ 24 ಎಂದು ಸ್ಥಾನಗಳೆಂದು ಹೇಳಿದೆ. ನಾಗಾಲ್ಯಾಂಡ್‌ನಲ್ಲಿ 60 ಸ್ಥಾನಗಳಲ್ಲಿ, BJP-NDPP (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) ಮೈತ್ರಿ 35 ರಿಂದ 43 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಜೀ ನ್ಯೂಸ್- ಮ್ಯಾಟ್ರಿಸ್ ವರದಿ ಮಾಡಿದೆ. ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಈ ಸಂಖ್ಯೆಯು 38 ರಿಂದ 48 ಸ್ಥಾನಗಳ ನಡುವೆ ಇರಬಹುದೆಂದು ಊಹಿಸಿದರೆ, ಟೈಮ್ಸ್ ನೌ ಇದನ್ನು 44 ಎಂದು ಹೇಳುತ್ತದೆ.
ಮೇಘಾಲಯದಲ್ಲಿ, ಜೀ ನ್ಯೂಸ್ ಮ್ಯಾಟ್ರಿಕ್ಸ್ನ ಸಮೀಕ್ಷೆಗಳು ಎನ್ಪಿಪಿ 21-26 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಟೈಮ್ಸ್ ನೌ ಈ ಸಂಖ್ಯೆಯನ್ನು 22 ಮತ್ತು ಇಂಡಿಯಾ ಟುಡೆ-ಆಕ್ಸಿಸ್ 18ರಿಂದ 24 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದೆ. ಬಿಜೆಪಿ ಈ ಬಾರಿ 6 ರಿಂದ 11 ಸ್ಥಾನಗಳನ್ನು ಗೆಲ್ಲಲಿದೆ. 2018ರ ಲೆಕ್ಕಾಚಾರವನ್ನು ಉತ್ತಮಗೊಳಿಸುತ್ತದೆ ಎಂದು ಜೀ ನ್ಯೂಸ್ ಮ್ಯಾಟ್ರಿಕ್ಸ್ ಎಕ್ಸಿಟ್ ಪೋಲ್ ಭವಿಷ್ಯ ತಿಳಿಸಿದೆ. ತೃಣಮೂಲ ಕಾಂಗ್ರೆಸ್ ಕೂಡ 8ರಿಂದ 13 ಸ್ಥಾನಗಳೊಂದಿಗೆ ಖಾತೆ ತೆರೆಯಲಿದೆ.
ಇದನ್ನೂಓದಿ:ದೊಡ್ಡಬಳ್ಳಾಪುರ ಶಾಸಕರ ಜತೆ ಆಗಮಿಸಿ ಡಿಕೆಶಿ ಭೇಟಿಯಾದ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ