ಕೋಥೂರ್ (ತೆಲಂಗಾಣ): ದೇಶದಲ್ಲಿರುವ ಸರ್ಕಾರದ ವಿವಿಧ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆದಿದೆ. ನ್ಯಾಯಾಂಗ, ಅಧಿಕಾರಶಾಹಿ ಮತ್ತು ಮಾಧ್ಯಮಗಳ ಮೇಲೆ ದಾಳಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ, ಈ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಹಿಡಿತದಿಂದ ಮುಕ್ತಗೊಳಿಸಲಾಗುವುದು ಮತ್ತು ಈ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ಉಳಿಸುವುದನ್ನು ನಾವು ಖಚಿತಪಡಿಸಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಕೋಥೂರ್‌ನಲ್ಲಿಂದು 'ಭಾರತ್ ಜೋಡೋ ಯಾತ್ರೆ'ಯ ಮಧ್ಯೆ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಟಿಆರ್ಎಸ್ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಯಾವುದೇ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ತಪ್ಪು ಕಲ್ಪನೆ ಉಂಟಾಗಿದೆ ಎಂದು ತಿಳಿಸಿದರು.
ಟಿಆರ್‌ಎಸ್ ಅನ್ನು ಬಿಆರ್ಎಸ್ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಮಾತನಾಡಿದ ಗಾಂಧಿ, ಕೆಸಿಆರ್ ರಾಷ್ಟ್ರೀಯ ಪಕ್ಷ ಸ್ಥಾಪಿಸಲು ಬಯಸಿದರೆ ಅದು ಉತ್ತಮ ಸಂಗತಿ. ಅವರು ಒಂದು ವೇಳೆ ವಿಶ್ವಮಟ್ಟದ ಪಕ್ಷ ಸ್ಥಾಪಿಸಲು ಬಯಸಿದರೆ ಚೀನಾ ಅಥವಾ ಇಂಗ್ಲೆಂಡ್ನಲ್ಲಿ ಸ್ಪರ್ಧಿಸಲಿ. ಆದರೆ ಬಿಜೆಪಿ ಸಿದ್ಧಾಂತವನ್ನು ಕಾಂಗ್ರೆಸ್ ಸಿದ್ಧಾಂತದಿಂದ ಮಾತ್ರ ಸೋಲಿಸಲು ಸಾಧ್ಯ ಎಂದು ಹೇಳಿದರು.
ನಮ್ಮದು ಪ್ರಜಾಸತ್ತಾತ್ಮಕ ಪಕ್ಷ. ನಾವು ಸರ್ವಾಧಿಕಾರದ ಆಡಳಿತ ನಡೆಸುವುದಿಲ್ಲ ಎಂಬುದು ನಮ್ಮ ಡಿಎನ್‌ಎದಲ್ಲಿದೆ. ಇತ್ತೀಚೆಗೆ ನಮ್ಮ ಪಕ್ಷದ ಅಧ್ಯಕ್ಷರನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗಿದೆ. ಆರ್‌ಎಸ್‌ಎಸ್, ಬಿಜೆಪಿ, ಟಿಆರ್‌ಎಸ್ ಮತ್ತು ಇತರ ರಾಜಕೀಯ ಪಕ್ಷಗಳು ಯಾವಾಗ ಚುನಾವಣೆ ನಡೆಸುತ್ತವೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೇನೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದರು.
ಇದನ್ನೂ ಓದಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು