ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ 2ನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ದಿನ ಕಳೆದಂತೆ ಹೆಚ್ಚಿನ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ದೆಹಲಿಯಲ್ಲಿ ಲಾಕ್ಡೌನ್ ಹೇರಿಕೆ ಇಲ್ಲ ಎಂದ ಕೇಜ್ರಿವಾಲ್ ಸಭೆ ಮುಕ್ತಾಯದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್, ನಾವು ಕೋವಿಡ್ ವ್ಯಾಕ್ಸಿನ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ನಿನ್ನೆ ಒಂದೇ ದಿನ 71,000 ಜನರಿಗೆ ಲಸಿಕೆ ನೀಡಲಾಗಿದೆ ಎಂದರು. ಜತೆಗೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಹೇರಿಕೆ ಮಾಡುವುದಿಲ್ಲ ಎಂದು ಖಚಿತಪಡಿಸಿದರು.
ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗಿದ್ದು, ಕಳೆದ 24 ಗಂಟೆಯಲ್ಲಿ 3,583 ಹೊಸ ಪ್ರಕರಣ ಕಾಣಿಸಿಕೊಂಡಿವೆ. ಪ್ರಕರಣ ಹೆಚ್ಚಾಗದಂತೆ ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಕೇಜ್ರಿವಾಲ್, ಯಾವುದೇ ಕಾರಣಕ್ಕೂ ಜನರು ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ದೆಹಲಿಯಲ್ಲಿ ಇಲ್ಲಿಯವರೆಗೆ 6,65,220 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, ಇದರಲ್ಲಿ ಸದ್ಯ 10,498 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಒಂದೇ ದಿನ 3 ಸಾವಿರಕ್ಕಿಂತಲೂ ಅಧಿಕ ಸೋಂಕಿತ ಪ್ರಕರಣ ದಾಖಲಾಗಿವೆ.