ಗಾಂಧಿನಗರ (ಗುಜರಾತ್) : ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು (ಸಿಇಟಿ) ದೇಶವೊಂದರ ಸಾಮರ್ಥ್ಯದ ಅಳತೆಗೋಲಗಳಾಗಿ ಹೊರಹೊಮ್ಮಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದ್ದಾರೆ. ವರ್ಚುವಲ್ ಆಗಿ ಸೆಮಿಕಾನ್‌ಇಂಡಿಯಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, "ಸಿಇಟಿಗಳು ಈಗ ಅಧಿಕಾರದ ಪ್ರಮುಖ ಅಳತೆಗೋಲಗಳಾಗಿ ಹೊರಹೊಮ್ಮುವುದರಲ್ಲಿ ಆಶ್ಚರ್ಯವಿಲ್ಲ. ಈ ತಂತ್ರಜ್ಞಾನಗಳನ್ನು ಯಾರು ಆವಿಷ್ಕರಿಸುತ್ತಾರೆ, ಯಾರು ತಯಾರಿಸುತ್ತಾರೆ, ಮಾರುಕಟ್ಟೆಯಲ್ಲಿ ಇವುಗಳ ಪಾಲು ಎಷ್ಟು, ಸಂಪನ್ಮೂಲಗಳು ಎಲ್ಲಿವೆ, ಯಾರಿಗೆ ಕೌಶಲ್ಯವಿದೆ, ಟ್ಯಾಲೆಂಟ್ ಪೂಲ್ ಎಲ್ಲಿದೆ ಈ ಎಲ್ಲವೂ ಅತಿ ಹೆಚ್ಚು ನಿರ್ಣಾಯಕ ಪ್ರಶ್ನೆಗಳಾಗಿವೆ." ಎಂದರು.
ಚಿಪ್ ತಯಾರಿಕೆಯ ವಲಯದಲ್ಲಿ ಯುದ್ಧ ನಡೆಯುತ್ತಿದೆ ಎನ್ನುವುದು ಸ್ವಲ್ಪಮಟ್ಟಿಗೆ ಅತಿಶಯೋಕ್ತಿಯಾಗಬಹುದು. ಆದರೆ ಇದು ವಾಸ್ತವದಲ್ಲಿ ನಡೆಯುತ್ತಿರುವ ಸತ್ಯವಾಗಿದೆ ಎಂದು ಅವರು ತಿಳಿಸಿದರು. ತಂತ್ರಜ್ಞಾನದ ವ್ಯಾಪಾರ ಕೇವಲ ವ್ಯಾಪಾರವಲ್ಲ, ಅದು ರಾಜ್ಯಶಾಸ್ತ್ರವನ್ನೂ ಒಳಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದರು. "ಸತ್ಯವೆಂದರೆ ನಾವು ರಫ್ತು ನಿಯಂತ್ರಣಗಳ ಪುನರುತ್ಥಾನವನ್ನು ಆರ್ಥಿಕ ಬಲದ ಪ್ರತಿಪಾದನೆಗಳಿಗೆ ಪ್ರತಿಕ್ರಿಯೆಯಾಗಿ ನೋಡುತ್ತಿದ್ದೇವೆ" ಎಂದು ಅವರು ನುಡಿದರು.
ಈ ವಿಷಯದ ಬಗ್ಗೆ ವ್ಯಾಪಕವಾದ ಜಾಗತಿಕ ಸಂವಹನಗಳು ನಡೆದಿವೆ. ಮಾರ್ಚ್ 2023 ರಲ್ಲಿ US ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೋ ಅವರ ಭಾರತ ಭೇಟಿ ಸಂದರ್ಭದಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಮಾಡಿಕೊಳ್ಳಲಾದ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಮತ್ತು ನಾವೀನ್ಯತೆ ಪಾಲುದಾರಿಕೆಗೆ ಸಂಬಂಧಿಸಿದ ತಿಳಿವಳಿಕೆ ಒಪ್ಪಂದವು ಅವುಗಳ ಪೈಕಿ ಗಮನಾರ್ಹವಾಗಿದೆ. ಅದು ಅಮೆರಿಕದ ಚಿಪ್ಸ್ ಮತ್ತು ವಿಜ್ಞಾನ ಕಾಯಿದೆ ಮತ್ತು ಭಾರತದ ಸೆಮಿಕಂಡಕ್ಟರ್ ಮಿಷನ್‌ನ ಉತ್ಪಾದಕತೆಯ ಸಾಮರ್ಥ್ಯವನ್ನು ತೋರಿಸುವ ಸಹಯೋಗದ ಕಾರ್ಯವಿಧಾನವನ್ನು ಸ್ಥಾಪಿಸಲು ಈ ಒಪ್ಪಂದ ಪ್ರಯತ್ನಿಸಿತು ಎಂದು ಜೈಶಂಕರ್ ಹೇಳಿದರು.