ನವದೆಹಲಿ: ಸಂಸತ್ನಲ್ಲಿ ಆರಂಭವಾಗಿರುವ ಕೇಂದ್ರ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಭಾಷಣದ ಉದ್ದಕ್ಕೂ ಅನೇಕ ವಿಚಾರಗಳನ್ನ ಪ್ರಸ್ತಾಪಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ನನ್ನ ಭಾರತದ ಬಗ್ಗೆ ಚಿಂತೆ ಶುರುವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತು ಇದೀಗ ಎರಡು ವಿಭಿನ್ನ ಭಾರತಗಳಿವೆ, ಒಂದು ಶ್ರೀಮಂತರಿಗೆ ಮತ್ತೊಂದು ಬಡವರಿಗಾಗಿ. ಎರಡರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು. ಸುಮಾರು 50 ನಿಮಿಷಗಳ ಕಾಲ ಮಾತನಾಡಿದ ರಾಹುಲ್ ಗಾಂಧಿ, ರಾಷ್ಟ್ರಪತಿಗಳ ಭಾಷಣದಲ್ಲಿ ಯಾವುದೇ ರೀತಿಯ ಹೊಸ ವಿಚಾರಗಳು ಕಾಣಿಸಲಿಲ್ಲ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾದ ಬಗ್ಗೆ ಈ ಹಿಂದಿನಿಂದಲೂ ಮಾತನಾಡುತ್ತಲೇ ಇದ್ದಾರೆ. ಆದರೆ, ದೇಶದಲ್ಲಿ ನಿರುದ್ಯೋಗ ಹೆಚ್ಚು ಉಲ್ಬಣಗೊಂಡಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು. ಆದರೆ, ಈ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಏನಾಯಿತು ಎಂಬುದರ ಬಗ್ಗೆ ರಾಷ್ಟ್ರಪತಿಗಳು ಮಾತನಾಡಿಲ್ಲ. ಅಧ್ಯಕ್ಷರ ಭಾಷಣದಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ವಾಕ್ಯ ಸಹ ಇರಲಿಲ್ಲ. ದಿನದಿಂದ ದಿನಕ್ಕೆ ಉದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದ್ದು, 2021ರಲ್ಲೇ ಮೂರು ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದ 50 ವರ್ಷಗಳಲ್ಲೇ ಉಂಟಾಗಿರುವ ಹೆಚ್ಚಿನ ನಿರುದ್ಯೋಗ ಇದು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿರಿ: '₹16 ಸಾವಿರ ಕೋಟಿ ನೀಡಿ ಹೆಲಿಕಾಪ್ಟರ್ ಖರೀದಿಸುವ ಪ್ರಧಾನಿಗೆ ರೈತರ ಕಬ್ಬಿನ ಬಾಕಿ ನೀಡಲು ಆಗ್ತಿಲ್ಲ': ಪ್ರಿಯಾಂಕಾ
ಕೇಂದ್ರ ಸರ್ಕಾರ ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಈ ಬಗ್ಗೆ ಮಾತನಾಡಿದರೆ ದೇಶದ ಜನರು ನಿಮ್ಮನ್ನ ತಮಾಷೆ ಮಾಡುತ್ತಾರೆ. ಯುಪಿಎ ಅಧಿಕಾರ ನಡೆಸುತ್ತಿದ್ದ ವೇಳೆ ದೇಶದ 23 ಕೋಟಿ ಬಡವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿತ್ತು. ಆದರೆ, ಇದೀಗ ಶ್ರೀಮಂತ ಜನರಿಗೆ ಮಾತ್ರ ಎಲ್ಲ ಸೌಲಭ್ಯ ಸಿಗುವಂತೆ ಮಾಡಲಾಗ್ತಿದೆ ಎಂದು ವಾಗ್ದಾಳಿ ನಡೆಸಿದರು.
ನನ್ನ ದೇಶದ ಬಗ್ಗೆ ತುಂಬಾ ಚಿಂತಿತನಾಗಿದ್ದೇನೆ. ಈ ರಾಷ್ಟ್ರವನ್ನ ನೀವೂ ಅತಿದೊಡ್ಡ ಅಪಾಯಕ್ಕೆ ಸಿಲುಕಿಸುತ್ತಿದ್ದೀರಿ. ಚೀನಾ, ಪಾಕಿಸ್ತಾನದ ಗಡಿಯಲ್ಲಿ ಇನ್ನಿಲ್ಲದ ಸಮಸ್ಯೆ ಉಂಟಾಗಿದೆ ಇದರ ಬಗ್ಗೆ ಮಾತನಾಡಲು ನಿಮಗೆ ಆಗುತ್ತಿಲ್ಲ ಎಂದು ಹರಿಹಾಯ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ರಾಹುಲ್ ಗಾಂಧಿ ಭಾಷಣದ ಆಯ್ದ ಭಾಗಗಳು
- ಕಳೆದ ವರ್ಷ ಮೂರು ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ, ಕಳೆದ 50 ವರ್ಷಗಳಲ್ಲೇ ಹೆಚ್ಚಿನ ನಿರುದ್ಯೋಗ ಸಮಸ್ಯೆ
- ಅಧ್ಯಕ್ಷರ ಭಾಷಣದ ವೇಳೆ ಉದ್ಯೋಗದ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪವಿಲ್ಲ
- ಅಸಂಘಟಿತ ವಲಯದ ಮೇಲೆ ಕೇಂದ್ರ ಸರ್ಕಾರ ದಾಳಿ
- ಯುಪಿಎ ಸರ್ಕಾರ ದೇಶದ 27 ಕೋಟಿ ಜನರನ್ನ ಬಡತನ ರೇಖೆಯಿಂದ ಮೇಲ್ದರ್ಜೆಗೆ ತೆಗೆದುಕೊಂಡು ಹೋಗಿತ್ತು
- ಸಣ್ಣ ಕೈಗಾರಿಕೆಗಳು ಇದೀಗ ಸಂಪೂರ್ಣವಾಗಿ ನಾಶವಾಗುತ್ತಿವೆ
- ಸಣ್ಣ ಕೈಗಾರಿಕೆ ಸಂಪೂರ್ಣವಾಗಿ ನಾಶವಾಗಿರುವ ಕಾರಣ ಮೇಕ್ ಇನ್ ಇಂಡಿಯಾ ಯಶಸ್ವಿ ಅಸಾಧ್ಯ
- ದೇಶದ 10 ಜನರ ಬಳಿ ಶೇ. 40ರಷ್ಟು ಸಂಪತ್ತು ಇದೆ, ಕೇಂದ್ರ ಇವರಿಗೋಸ್ಕರ ಆಡಳಿತ ಮಾಡ್ತಿದೆ
- ಕಳೆದ ಮೂರು ಸಾವಿರ ವರ್ಷಗಳಿಂದ ಸಂಧಾನದ ಮೂಲಕ ಆಡಳಿತ ನಡೆಸಲಾಗ್ತಿದೆ, ಆದರೆ ನೀವೂ ಆಳಲು ಮುಂದಾಗಿದ್ದೀರಿ
- ನ್ಯಾಯಾಂಗ, ಚುನಾವಣಾ ಆಯೋಗ ಇದೀಗ ಸಂಪೂರ್ಣವಾಗಿ ನಾಶವಾಗಿದೆ
- ಚೀನಾ, ಪಾಕಿಸ್ತಾನ ಇದೀಗ ಭಾರತದ ಮೇಲೆ ನೇರವಾಗಿ ದಾಳಿ ಮಾಡಲು ಶುರು ಮಾಡಿವೆ