ಕರ್ನಾಟಕ

karnataka

ETV Bharat / bharat

ಹಿಮಾಚಲದಲ್ಲಿ ತಯಾರಾಗಿದೆ ವಿಶ್ವದ ಅತಿ ದೊಡ್ಡ ಪೆನ್​.. ಏನಿದರ ವೈಶಿಷ್ಟ್ಯ? - ವಿಶ್ವದ ಅತಿ ದೊಡ್ಡ ಇಂಕ್ ಪೆನ್

ರಾಜ್ಯದ ಸಿರ್ಮೌರ್​ನ ಶಿಕ್ಷಕ ಸಂಜೀವ್ ಅತ್ರಿ ಎಂಬುವರು ಖಡ್ಗಕ್ಕಿಂತ ದೊಡ್ಡದಾಗಿರುವ ಪೆನ್ನನ್ನು ತಯಾರಿಸಿದ್ದಾರೆ. ಹಿಮಾಚಲದಲ್ಲಿ ತಯಾರಾದ ಈ ಇಂಕ್ ಪೆನ್ ವಿಶ್ವದ ಅತಿ ದೊಡ್ಡ ಇಂಕ್ ಪೆನ್ ಎಂದು ಹೇಳಲಾಗುತ್ತಿದೆ.

ವಿಶ್ವದ ಅತಿ ದೊಡ್ಡ ಪೆನ್
world's largest pen

By

Published : Sep 3, 2022, 1:02 PM IST

ನಹಾನ್ (ಹಿಮಾಚಲ ಪ್ರದೇಶ): ಪೆನ್ನು ಖಡ್ಗಕ್ಕಿಂತ ಹೆಚ್ಚು ಶಕ್ತಿಶಾಲಿ ಎಂಬ ಮಾತನ್ನು ನೀವೆಲ್ಲರೂ ಕೇಳಿರಬಹುದು. ನೀವೀಗ ಈ ಮಾತಿನ ಸಾಕ್ಷಾತ್ ರೂಪವನ್ನೂ ನೋಡಬಹುದು. ರಾಜ್ಯದ ಸಿರ್ಮೌರ್​ನ ಶಿಕ್ಷಕ ಸಂಜೀವ್ ಅತ್ರಿ ಎಂಬುವರು ಖಡ್ಗಕ್ಕಿಂತ ದೊಡ್ಡದಾಗಿರುವ ಪೆನ್ನನ್ನು ತಯಾರಿಸಿದ್ದಾರೆ. ಹಿಮಾಚಲದಲ್ಲಿ ತಯಾರಾದ ಈ ಇಂಕ್ ಪೆನ್ ವಿಶ್ವದ ಅತಿ ದೊಡ್ಡ ಇಂಕ್ ಪೆನ್ ಎಂದು ಹೇಳಲಾಗುತ್ತಿದೆ. ಈ 20 ಅಡಿ ಉದ್ದದ ಪೆನ್ ಕೇವಲ ಶೋಪೀಸ್ ಅಲ್ಲ. ಇದರಲ್ಲಿ ಶಾಯಿ ಕೂಡ ಇರುತ್ತದೆ ಮತ್ತು ಇದರಿಂದ ಬರೆಯಬಹುದು. ಆದರೆ ಈ ದೈತ್ಯ ಇಂಕ್ ಪೆನ್ನನ್ನು ಎತ್ತಲು ಮಾತ್ರ ಸಾಕಷ್ಟು ಬೆವರು ಸುರಿಸಬೇಕಾಗುತ್ತದೆ. ಇಂದು ಅಂದರೆ ಶನಿವಾರದಂದು ಈ ಪೆನ್ನನ್ನು ಮಕ್ಕಳಿಗೆ ಸಮರ್ಪಿಸಲಾಗುವುದು. ನಹಾನ್ ಶಾಸಕ ಡಾ. ರಾಜೀವ್ ಬಿಂದಾಲ್ ಈ ಪೆನ್ ಬಿಡುಗಡೆ ಮಾಡಲಿದ್ದಾರೆ.

ಮಕ್ಕಳಿಗೆ ಪಾಠ ಮಾಡುವ ಪೆನ್:ಬೋಧನೆ ಮತ್ತು ಕಲಿಕೆಯನ್ನು ನೀಡುವ ರೀತಿಯಲ್ಲಿ ಈ ಪೆನ್ ಅನ್ನು ವಿಶಿಷ್ಟ ಕೌಶಲ್ಯದ ಅಡಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಸಂಜೀವ್ ಅತ್ರಿ ಹೇಳಿದರು. ಪೆನ್ನಿನ ವಿಶೇಷತೆ ಏನೆಂದರೆ ಈ ಪೆನ್ ನಲ್ಲಿ ಸೌಂಡ್ ಸೆನ್ಸರ್ ಅಳವಡಿಸಲಾಗಿದೆ. ಒಂದು ವೇಳೆ ಶಿಕ್ಷಕರು ಮರುದಿನ ರಜೆ ತೆಗೆದುಕೊಳ್ಳಲು ಬಯಸಿದರೆ, ಅವರು ತಮ್ಮ ಪಾಠವನ್ನು ರೆಕಾರ್ಡ್ ಮಾಡಿ ಶಾಲಾ ಆಡಳಿತ ಮಂಡಳಿಗೆ ಮೊಬೈಲ್ ಮೂಲಕ ಕಳುಹಿಸುತ್ತಾರೆ. ಇದರ ನಂತರ, ಧ್ವನಿ ಸಂವೇದಕದ ಸಹಾಯದಿಂದ ರೆಕಾರ್ಡ್ ಮಾಡಿದ ಪಾಠವನ್ನು ಪೆನ್‌ಗೆ ಕಳುಹಿಸಲಾಗುತ್ತದೆ. ಮರುದಿನ ಮಕ್ಕಳನ್ನು ಪೆನ್ನಿನ ಬಳಿ ಕೂರಿಸಿ ರಜೆ ಮೇಲೆ ಹೋಗಿರುವ ಶಿಕ್ಷಕರ ದನಿಯಲ್ಲಿ ಪಾಠ ಹೇಳಿಕೊಡುವ ಮೂಲಕ ಸೆನ್ಸರ್ ಕೆಲಸ ಮಾಡಲಿದೆ. ಅಂದರೆ ಶಿಕ್ಷಕರ ಅನುಪಸ್ಥಿತಿಯಲ್ಲಿ ಪೆನ್ ಮಕ್ಕಳಿಗೆ ಪಾಠ ಮಾಡುತ್ತದೆ.

ವಿಶ್ವದ ಅತಿ ದೊಡ್ಡ ಪೆನ್

ಪ್ರಾರ್ಥನೆ ಹೇಳುತ್ತೆ ಪೆನ್: ನೌರಂಗಾಬಾದ್ ಶಾಲೆಯಲ್ಲಿ ಪಿಟಿಐ ಇಲ್ಲದ ಕಾರಣ ಇದೀಗ ಈ ದೊಡ್ಡ ಪೆನ್ ಶಾಲೆಯಲ್ಲಿ ಪ್ರಾರ್ಥನೆ ನಡೆಸಲು ನೆರವಾಗಲಿದೆ. ಇದು ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕಥೆ ಹೇಳುತ್ತದೆ. ಮಕ್ಕಳು ಈ ಲೇಖನಿಯಿಂದ ಹಾಡು ಕೂಡ ಕೇಳಬಹುದು. ಈ ಪೆನ್ ಅನ್ನು ಸೌರಶಕ್ತಿಯಿಂದ ಚಾರ್ಜ್ ಮಾಡಬಹುದು. ಇನ್ನು ರಾತ್ರಿ ವೇಳೆಯಲ್ಲಿ ಇದನ್ನು ಬೆಳಕಿಗಾಗಿ ಬ್ಯಾಟರಿ ರೀತಿಯಲ್ಲೂ ಉಪಯೋಗಿಸಬಹುದು.

20 ಅಡಿ ಎತ್ತರ, 42 ಕೆ.ಜಿ ತೂಕ: ನೌರಂಗಾಬಾದ್, ದೌಲಕುವಾನ್‌ನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಂಜೀವ್ ಅತ್ರಿ ಅವರು ತಯಾರಿಸಿದ ಈ ಇಂಕ್ ಪೆನ್ 20 ಅಡಿ ಉದ್ದ ಮತ್ತು 42 ಕೆ.ಜಿ. ಸುಮಾರು 1 ಅಡಿ ಅಗಲವಾಗಿದೆ. ಈ ಪೆನ್ ತಯಾರಿಸಲು ಮರ ಮತ್ತು ಕಬ್ಬಿಣವನ್ನು ಬಳಸಲಾಗಿದೆ. ಈ ಇಂಕ್ ಪೆನ್ ಜಗತ್ತಿನ ಅತಿ ಉದ್ದದ ಇಂಕ್ ಪೆನ್ ಎಂದು ಅತ್ರಿ ಹೇಳುತ್ತಾರೆ. ಇದನ್ನು ತಯಾರಿಸಲು 45 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. 6 ಶಿಕ್ಷಕರು ಒಟ್ಟಾಗಿ ಈ ಪೆನ್ ತಯಾರಿಕೆಯ ಖರ್ಚು ಭರಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಪೆನ್​

ಮೂರು ಭಾಗಗಳು: 3 ಭಾಗಗಳಲ್ಲಿ ಈ ಪೆನ್ ತಯಾರಿಸಲಾಗಿದೆ ಎಂದು ಸಂಜೀವ್ ಅತ್ರಿ ತಿಳಿಸಿದರು. ಮೊದಲನೆಯದು ಮುಚ್ಚಳ, ಎರಡನೆಯದು ಮಧ್ಯ ಭಾಗ ಮತ್ತು ಮೂರನೇ ಭಾಗವು ಅದರ ನಿಬ್ ಇರುತ್ತದೆ. ಪೆನ್ನಿನ ನಿಬ್ ಮತ್ತು ಶ್ಯಾಂಕ್ ಸುಮಾರು ಎರಡೂವರೆ ಅಡಿ ಉದ್ದವಿದೆ. ಪೆನ್ನಿನೊಳಗೆ ಶಾಯಿ ತುಂಬುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಂಕ್ ಅನ್ನು ಮೊದಲಿಗೆ ಒಂದು ಚೀಲದಲ್ಲಿ ತುಂಬಿಸಲಾಗುತ್ತದೆ. ನಂತರ ಅದು ಪೈಪ್ ಮೂಲಕ ನಿಬ್ ಅನ್ನು ತಲುಪುತ್ತದೆ. ಈ ಪೆನ್​ನಿಂದ ಬರೆಯಲು ಸಾಧ್ಯವಿದೆ. ಆದರೆ ಭಾರವಾಗಿರುವ ಕಾರಣ ಒಬ್ಬನೇ ಇದನ್ನು ಎತ್ತಲು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

ಕಾವಲು ಕಾಯುತ್ತೆ ಪೆನ್: ಈ ಇಂಕ್ ಪೆನ್ ಅನ್ನು ಶಾಲಾ ಆವರಣದಲ್ಲಿ ಅಳವಡಿಸಲಾಗುವುದು ಎಂದು ಸಂಜೀವ್ ಅತ್ರಿ ತಿಳಿಸಿದರು. ಪೆನ್‌ನಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಸಹ ಜೋಡಿಸಲಾಗಿದ್ದು, ಇದರ ನಿಯಂತ್ರಣ ಶಾಲೆಯ ಆಡಳಿತ ಮಂಡಳಿಯ ಬಳಿ ಇರುತ್ತದೆ. ಕಚೇರಿಯಲ್ಲಿ ಕುಳಿತ ಶಾಲಾ ಆಡಳಿತ ಮಂಡಳಿಯವರು ಆವರಣದಲ್ಲಿರುವ ಮಕ್ಕಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ. ಹೀಗೆ ಇದರಲ್ಲಿರುವ ಸಿಸಿಟಿವಿ ಸಹಾಯದಿಂದ ಈ ಪೆನ್ ಶಾಲೆಯ ಭದ್ರತೆಗೂ ಸಹಕಾರಿಯಾಗಲಿದೆ.

ಮಿನಿ ಸಿನಿಮಾ ಹಾಲ್‌ಗಳನ್ನೂ ತಯಾರಿಸಿದ್ದರು ಅತ್ರಿ:ನೌರಂಗಾಬಾದ್ ಶಾಲೆಯಲ್ಲಿ ಈ ಹಿಂದೆ ಮುಖ್ಯಶಿಕ್ಷಕ ಸಂಜೀವ್ ಅತ್ರಿ ಅವರ ಮಾರ್ಗದರ್ಶನದಲ್ಲಿ ಮಿನಿ ಚಿತ್ರಮಂದಿರಗಳನ್ನು ಸಹ ಸಿದ್ಧಪಡಿಸಲಾಗಿದೆ. ಇಲ್ಲಿ ಮಕ್ಕಳಿಗೆ ಶೈಕ್ಷಣಿಕ ಮತ್ತು ಜ್ಞಾನ ನೀಡುವ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಪಟ್ಟಣದಿಂದ ದೂರವಿರುವ ಗುಜ್ಜರ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಈ ಶಾಲೆ ಇದೆ ಎಂಬುದು ಗಮನಾರ್ಹ. ಶಾಲೆಯಲ್ಲಿ ನಡೆಯುತ್ತಿರುವ ಈ ಹೊಸ ಆವಿಷ್ಕಾರಗಳಿಂದ ಇಲ್ಲಿನ ಮಕ್ಕಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ. ಕಳೆದ ವರ್ಷ ಈ ಶಾಲೆಯಲ್ಲಿ 64 ಮಕ್ಕಳಿದ್ದರು. ಈ ಬಾರಿ ಮಕ್ಕಳ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

ಈ ಹಿಂದೆ ತಯಾರಿಸಲಾದ ಅತಿ ದೊಡ್ಡ ಪೆನ್:ನೌರಂಗಾಬಾದ್ ಶಾಲೆಯಲ್ಲಿ ತಯಾರಿಸಲಾದ ಇಂಕ್ ಪೆನ್‌ಗಿಂತ ಮೊದಲು, ವಿಶ್ವದ ಅತಿದೊಡ್ಡ ಬಾಲ್ ಪೆನ್ ಅನ್ನು ಹೈದರಾಬಾದ್ ನಿವಾಸಿ ಆಚಾರ್ಯ ಮಕುನೂರಿ ಶ್ರೀನಿವಾಸ ಎಂಬುವರು ಸಿದ್ಧಪಡಿಸಿದ್ದರು. ಇದು ಗಿನ್ನೆಸ್ ವಿಶ್ವ ದಾಖಲೆಯಲ್ಲೂ ದಾಖಲಾಗಿದೆ. ಈ ಬಾಲ್ ಪೆನ್ 18 ಅಡಿ ಉದ್ದ, 37.23 ಕೆಜಿ ತೂಕವಿತ್ತು. ಈಗ ನೌರಂಗಾಬಾದ್ ಶಾಲೆಯ ಆಡಳಿತ ಮಂಡಳಿಯು ತಾವು ಸಿದ್ಧಪಡಿಸಿದ ಇಂಕ್ ಪೆನ್ ವಿಶ್ವದ ಅತಿದೊಡ್ಡ ಇಂಕ್ ಪೆನ್ ಆಗಿದೆ ಎಂದು ಹೇಳಿಕೊಂಡಿದೆ. ಇದಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಗೂ ಅರ್ಜಿ ಸಲ್ಲಿಸಲಾಗಿದೆ.

ಓದಿ: ಪ್ಲಾಸ್ಟಿಕ್​​ಗೆ ಬೈ ಹೇಳಿ... ಪರಿಸರ ಸ್ನೇಹಿ ಪೆನ್ನು ಬಳಸಿ... ಇಲ್ಲಿದೆ ವಿಶಿಷ್ಠ ಲೇಖನಿ ಉದಯದ ಇತಿಹಾಸ!

ABOUT THE AUTHOR

...view details