ನವದೆಹಲಿ: ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಈ ಅಸ್ಥಿರತೆಯ ಸ್ಥಿತಿ ಇನ್ನೂ ಎಷ್ಟು ದಿನ ಮುಂದುವರಿಯಲಿದೆ ಎಂಬುದನ್ನು ಊಹಿಸುವುದು ಕಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಘರ್ಷ, ಯುದ್ಧ ಮತ್ತು ಭಯೋತ್ಪಾದನೆಯಿಂದ ಉದ್ಭವಿಸುವ ವಿವಿಧ ಜಾಗತಿಕ ಸವಾಲುಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಮಾತು ಹೇಳಿದ್ದಾರೆ.ವಾಯ್ಸ್ ಆಫ್ ಗ್ಲೋಬಲ್ ಸೌತ್ ವರ್ಚುವಲ್ ಶೃಂಗಸಭೆಯಲ್ಲಿ ಸೋಮವಾರ ತಮ್ಮ ಆರಂಭಿಕ ಭಾಷಣದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬೆಲೆಗಳು, COVID-19 ನಿಂದಾದ ಆರ್ಥಿಕ ಪರಿಣಾಮ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ನೈಸರ್ಗಿಕ ವಿಕೋಪಗಳ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದರು.
ವಿವಿಧ ಅಭಿವೃದ್ಧಿಶೀಲ ರಾಷ್ಟ್ರಗಳ ಹಲವಾರು ನಾಯಕರ ಉಪಸ್ಥಿತಿಯಲ್ಲಿ ಮಾತನಾಡಿದ ಅವರು, ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟ. ಅಸ್ಥಿರತೆಯ ಸ್ಥಿತಿ ಇನ್ನೂ ಎಷ್ಟು ಕಾಲ ಇರುತ್ತದೆ ಎಂಬುದನ್ನು ಊಹಿಸಲಾಗದು. ನಾವು, ಗ್ಲೋಬಲ್ ಸೌತ್, ಭವಿಷ್ಯದಲ್ಲಿ ಅತಿದೊಡ್ಡ ಸವಾಲುಗಳನ್ನು ಎದುರಿಸಲಿದ್ದೇವೆ. ಬಹುತೇಕ ಜಾಗತಿಕ ಸಮಸ್ಯೆಗಳನ್ನು ಸೃಷ್ಟಿ ಮಾಡುವಲ್ಲಿ ಗ್ಲೋಬಲ್ ಸೌತ್ ಯಾವುದೇ ಪಾತ್ರ ಹೊಂದಿಲ್ಲ. ಆದರೂ ಅವು ನಮ್ಮ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಹೇಳಿದರು.
ಭಾರತ ಯಾವಾಗಲೂ ತನ್ನ ಅಭಿವೃದ್ಧಿಯ ಅನುಭವವನ್ನು ತನ್ನ ಜಾಗತಿಕ ದಕ್ಷಿಣದ ರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ. ಭಾರತವು ಈ ವರ್ಷ ತನ್ನ ಜಿ 20 ಅಧ್ಯಕ್ಷತೆಯನ್ನು ಪ್ರಾರಂಭಿಸುತ್ತಿದ್ದಂತೆ, ಜಾಗತಿಕವಾಗಿ ದಕ್ಷಿಣದ ಧ್ವನಿಯನ್ನು ವರ್ಧಿಸುವುದು ನಮ್ಮ ಗುರಿಯಾಗಿದೆ ಎಂದರು. ಗ್ಲೋಬಲ್ ಸೌತ್‌ನ ದೇಶಗಳನ್ನು ಒಟ್ಟುಗೂಡಿಸಲು ಮತ್ತು ಉಕ್ರೇನ್ ಸಂಘರ್ಷದಿಂದ ಉಂಟಾದ ಆಹಾರ ಮತ್ತು ಇಂಧನ ಭದ್ರತೆ ಸೇರಿದಂತೆ ವಿವಿಧ ಜಾಗತಿಕ ಸವಾಲುಗಳಿಗೆ ಸಂಬಂಧಿಸಿದಂತೆ ಈ ದೇಶಗಳ ಸಾಮಾನ್ಯ ಕಾಳಜಿಗಳನ್ನು ಹಂಚಿಕೊಳ್ಳಲು ಸಾಮಾನ್ಯ ವೇದಿಕೆಯನ್ನು ಒದಗಿಸಲು ಭಾರತ ಎರಡು ದಿನಗಳ ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿದೆ.