ಕೋಝಿಕ್ಕೋಡ್ (ಕೇರಳ):ಕೋಝಿಕ್ಕೋಡ್‌ನ ಚಲಪುರಂನ ಗಣಪತ್ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕರು, ದೇಶದ 76ನೇ ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಿಸಲು ಯೋಚಿಸಿದ್ದಾರೆ. ವಿವಿಧ ಮಾತೃಭಾಷೆಯ ರಾಜ್ಯಗಳ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಭಾರತದ ವೈವಿಧ್ಯತೆಯ ಬಗ್ಗೆ ಯೋಚಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿ, ಶಾಲಾ ಶಿಕ್ಷಕರು ಬಹು-ಭಾಷಾ ದೇಶಭಕ್ತಿ ಗೀತೆಗಳನ್ನು ಹಾಡಿಸಲು ನಿರ್ಧರಿಸಿದ್ದಾರೆ. ಶಾಲಾ ಅಧಿಕಾರಿಗಳು, ಒಟ್ಟು 2,300 ವಿದ್ಯಾರ್ಥಿಗಳ ಪೈಕಿ, 1800ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮೆಗಾ ದೇಶಭಕ್ತಿ ಗೀತೆ ಹಾಡಲಿದ್ದಾರೆ.
ಏಳು ಭಾರತೀಯ ಭಾಷೆಗಳನ್ನು ಒಳಗೊಂಡ 15 ನಿಮಿಷಗಳ ದೇಶಭಕ್ತಿ ಗೀತೆಗಳನ್ನು ಶಾಲೆಯ ವಿದ್ಯಾರ್ಥಿಗಳು ಹಾಡಲಿದ್ದಾರೆ. ಅವೆಲ್ಲವನ್ನೂ ಸಮನ್ವಯವಾಗಿ ಹಾಡಲು ಸತತ ಅಭ್ಯಾಸಗಳು ನಡೆಯುತ್ತಿವೆ. 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಾರ್ವಕಾಲಿಕ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಶಿಕ್ಷಕರು ತಪ್ಪುಗಳನ್ನು ಸರಿಪಡಿಸಿಕೊಂಡು ಗಾಯನವನ್ನು ಉತ್ತಮಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
'ಇಂಡಿಯಾ ರಾಗ್ 2023':ವಿವಿಧ ಭಾರತೀಯ ರಾಜ್ಯಗಳ ವಿದ್ಯಾರ್ಥಿಗಳು ಕನ್ನಡ, ಸಂಸ್ಕೃತ, ತಮಿಳು, ತೆಲುಗು, ಹಿಂದಿ, ಕೊಂಕಣಿ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಲಿದ್ದಾರೆ. ಹಲವಾರು ವಿಶೇಷಚೇತನ ವಿದ್ಯಾರ್ಥಿಗಳು, ಎಲ್ಲ ಎಲ್ಲೆಗಳನ್ನು ದಾಟಿ ಒಂದಾಗಿ ಹಾಡಲಿದ್ದಾರೆ. ಮೆಗಾ ದೇಶಭಕ್ತಿಯ ಗೀತೆಯನ್ನು 'ಇಂಡಿಯಾ ರಾಗ್ 2023' ಎಂದು ಹೆಸರಿಸಲಾಗಿದೆ. ಆಗಸ್ಟ್ 14 ರಂದು ಬೆಳಿಗ್ಗೆ 11 ಗಂಟೆಗೆ ಶಾಲೆಯ ಅಂಗಳದಲ್ಲಿ 'ಇಂಡಿಯಾ ರಾಗ್' ಪ್ರದರ್ಶನಗೊಳ್ಳಲಿದೆ.