ವಾರಣಾಸಿ (ಉತ್ತರ ಪ್ರದೇಶ):ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಎರಡನೇ ದಿನದ ವಿಡಿಯೋಗ್ರಾಫಿ ಸಮೀಕ್ಷೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡುಬಂತು. ಹಿರಿಯ ಪೊಲೀಸ್ ಅಧಿಕಾರಿಗಳೇ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಶೃಂಗಾರ ಗೌರಿ ದೇವಸ್ಥಾನದ ವಿಷಯವಾಗಿ ವಾರಾಣಾಸಿಯ ಸಿವಿಲ್ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಾಲಯ ಮತ್ತು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪರಿಶೀಲನೆ ನಡೆಸಲು ಮತ್ತು ಚಿತ್ರೀಕರಣಕ್ಕೆ ಆದೇಶಿಸಿದೆ. ಅಂತೆಯೇ ಶನಿವಾರದಿಂದ ನ್ಯಾಯಾಲಯದಿಂದಲೇ ನೇಮಕಗೊಂಡ ತಂಡವು ಸಮೀಕ್ಷೆ ನಡೆಸಿದೆ. ಮಸೀದಿಯ ಎಲ್ಲ ನಾಲ್ಕು ಅಡಿಪಾಯಗಳು ಮತ್ತು ಪಶ್ಚಿಮ ಭಾಗದ ಗೋಡೆಯ ಸಮೀಕ್ಷೆ ಮುಗಿದಿದೆ. ಇದರಿಂದ ಈಗಾಗಲೇ ಬಹುತೇಕ ಸಮೀಕ್ಷೆ ಕಾರ್ಯ ಮುಕ್ತಾಯಗೊಂಡಂತಾಗಿದೆ.
'ಮಸೀದಿಗೆ ಧಕ್ಕೆಯಾದರೆ ಹೋರಾಟ': ಸಮೀಕ್ಷೆ ಹೆಸರಲ್ಲಿ ಜ್ಞಾನವಾಪಿ ಮಸೀದಿಗೆ ಏನಾದರೂ ಧಕ್ಕೆಯಾದರೆ ವ್ಯಾಪಕ ಪ್ರತಿಭಟನೆ ಎದುರಿಸಬೇಕಾಗುತ್ತಿದೆ ಎಂದು ಆಲಾ ಹಜರತ್ ದರ್ಗಾದ ವಕ್ತಾರ, ಮೌಲಾನಾ ಶಹಾಬುದ್ದೀನ್ ರಝ್ವಿ ಎಚ್ಚರಿಸಿದ್ದಾರೆ.
1992ರಲ್ಲಿ ಬಾಬ್ರಿ ಮಸೀದಿ, ಈಗ 2022ರಲ್ಲಿ ಜ್ಞಾನವಾಪಿ ಮಸೀದಿ ಬಗ್ಗೆ ಆಲೋಚನೆ ಮಾಡುವ ಸಮಯ ಬಂದಿದೆ ಎಂಬ ಬಿಜೆಪಿ ಮುಖಂಡ ಸಂಗೀತ್ ಸೋಮ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮೌಲಾನಾ, ಶತಮಾನಗಳಿಂದಲೂ ಹಿಂದೂ-ಮುಸ್ಲಿಂ ಶಾಂತಿಯಿಂದ ಬದುಕುತ್ತಿದ್ದಾರೆ. ಆದರೆ, ಕೆಲವು ವಿಭಜಕ ಶಕ್ತಿಗಳು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಜನರಲ್ಲಿ ದ್ವೇಷ ಬಿತ್ತಲು ಬಯಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಗ್ಯಾನವಾಪಿ ಮಸೀದಿ ವಿವಾದ: ಮೊದಲ ದಿನದ ಸರ್ವೇಯಲ್ಲಿ 3 ಕೊಠಡಿಗಳ ಚಿತ್ರೀಕರಣ, ನಾಳೆಯೂ ಮುಂದುವರಿಕೆ