ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಾಸ್’ ಚಂಡಮಾರುತವು ಒಡಿಶಾದ ಬಾಲಸೋರ್‌ನಲ್ಲಿ ಭೂ ಸ್ಪರ್ಶ ಪ್ರಕ್ರಿಯೆ ಪ್ರಾರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಕರಾವಳಿ ತೀರದಲ್ಲಿ ನೆಲೆಸಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಅತ್ಯಂತ ತೀವ್ರವಾದ ಸೈಕ್ಲೋನಿಕ್ ಬಿರುಗಾಳಿ ಯಾಸ್ ಬೆಳಿಗ್ಗೆ 10 ರಿಂದ 11 ಗಂಟೆ ಸುಮಾರಿಗೆ ಒಡಿಶಾದ ಭದ್ರಾಕ್ ಜಿಲ್ಲೆಯ ವಾಸುದೇವಪುರ-ಬಹನಾಗಾ ಪ್ರದೇಶದ ಸುತ್ತಲಿನ ಪ್ರದೇಶದಲ್ಲಿ ಭೂಪ್ರದೇಶಕ್ಕೆ ಅಪ್ಪಳಿಸಬಹುದು ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪ್ರದೀಪ್ ಕುಮಾರ್ ಜೆನಾ ಮಾಹಿತಿ ನೀಡಿದ್ದಾರೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಯಾಸ್ ಕಳೆದ 6 ಗಂಟೆಗಳಲ್ಲಿ ಸುಮಾರು 10 ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಸಾಗಿದೆ. ಸೈಕ್ಲೋನಿಕ್ ಬಿರುಗಾಳಿಯು ಇಂದು ಮುಂಜಾನೆ 3.30 ಕ್ಕೆ ಬಂಗಾಳದ ವಾಯುವ್ಯ ಕೊಲ್ಲಿಯಲ್ಲಿ ಧಮ್ರಾದ ಪೂರ್ವ-ಆಗ್ನೇಯಕ್ಕೆ 70 ಕಿ.ಮೀ, ಪ್ಯಾರಡಿಪ್‌ನ ಪೂರ್ವ-ಈಶಾನ್ಯಕ್ಕೆ 90 ಕಿ.ಮೀ, ಬಾಲಸೋರ್‌ನ ಆಗ್ನೇಯಕ್ಕೆ 130 ಕಿ.ಮೀ ಮತ್ತು 120 ದಿಘಾದ ದಕ್ಷಿಣಕ್ಕೆ ಕಿ.ಮೀನಲ್ಲಿ ಬೀಸಿದೆ.
ಚಂಡಮಾರುತ ಭೂಸ್ಪರ್ಶ ಮಾಡುವುದಕ್ಕೂ ಆರುಗಂಟೆ ಮುನ್ನ ಮತ್ತು ಆರುಗಂಟೆಗಳ ನಂತರದ ಅವಧಿಯಲ್ಲಿ ಭಾರಿ ಪರಿಣಾಮ ಉಂಟುಮಾಡಲಿದೆ. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಆರಂಭವಾಗಿದೆ. ಅದು ಮುಂದುವರಿಯಲಿದೆ. ಈ ಪ್ರದೇಶಗಳಲ್ಲಿ ಮಂಗಳವಾರ ಮಧ್ಯರಾತ್ರಿಯ ವೇಳೆಗೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.