ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇಂದು 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದೆ. ರಾಜ್ಯ ವಿಧಾನ ಸಭೆಯಲ್ಲಿ ಮಂಡನೆಯಾಗಲಿರುವ ಈ ಬಜೆಟ್ ಅತಿ ದೊಡ್ಡ ಬಜೆಟ್ ಆಗಿರಲಿದೆ. ಇನ್ನು ಬಜೆಟ್ ಕುರಿತು ಮಾತನಾಡಿರುವ ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ, ಬಜೆಟ್ನಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ, ಆರೋಗ್ಯ ವಲಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದಿದ್ದಾರೆ.
ಎರಡನೇ ಅವಧಿಗೆ ಸರ್ಕಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರದ ಎರಡನೇ ಬಜೆಟ್ ಇದಾಗಿದೆ. ಈ ಬಜೆಟ್ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ಬಜೆಟ್ ಜನರ ನಿರೀಕ್ಷೆಗಳ ಬಗ್ಗೆ ಗಮನ ಹರಿಸಲಿದ್ದು, ಎಲ್ಲರ ಅಭಿವೃದ್ದಿಗೆ ಒತ್ತು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು, ಈಗಾಗಲೇ ಚುನಾವಣೆ ವೇಳೆ ಪಕ್ಷ ಹೊರಡಿಸಿದ್ದ ಸಂಕಲ್ಪ ಪತ್ರದಂತೆ ರೈತರು, ಮಹಿಳೆಯರು ಮತ್ತು ಯುವ ಜನರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಬಜೆಟ್ ಗಾತ್ರ: ಮೂಲಗಳ ಪ್ರಕಾರ, ಬಜೆಟ್ ಗಾತ್ರವನ್ನು ಈ ಬಾರಿ ಶೇ 8-10ರಷ್ಟು ಹೆಚ್ಚಿಸಲಾಗಿದೆ. ಬಜೆಟ್ ಮೊತ್ತ 7 ಲಕ್ಷ ಕೋಟಿ ಎಂದು ನಿರೀಕ್ಷಿಸಲಾಗಿದೆ. ಕಳೆದ ಬಜೆಟ್ಗೆ ಹೋಲಿಸಿದಾಗ 50 ಸಾವಿರ ಕೋಟಿ ಹೆಚ್ಚಿರಲಿದೆ. ಕಳೆದ ಬಾರಿಯ ಬಜೆಟ್ ಗಾತ್ರ 6. 48 ಲಕ್ಷ ಕೋಟಿ ಇತ್ತು.
ಮೂಲಸೌಲಭ್ಯಗಳಿಗೆ ಒತ್ತು: ಈ ಬಾರಿ ಬಜೆಟ್ನಲ್ಲಿ ಮೂಲಸೌಲಭ್ಯ ಅಭಿವೃದ್ಧಿ, ಐಟಿ ಮತ್ತು ಆರೋಗ್ಯ, ಶಿಕ್ಷಣ ವಲಯಕ್ಕೆ ಹೆಚ್ಚಿನ ಪ್ರಾತಿನಿತ್ಯ ನೀಡಿದ್ದು, ಮಹಿಳೆಯರು, ಯುವಜನತೆ ಮತ್ತು ಬಡವರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ಜಾಗತಿಕ ಹೂಡಿಕೆದಾರರ ಶೃಂಗಸಭೆ 33.5 ಲಕ್ಷ ಕೋಟಿ ಮೌಲ್ಯದ ಹೂಡಿಕೆಯ ಭರವಸೆಗಳನ್ನು ಪಡೆಯಲಾಗಿದೆ. ಹೂಡಿಕೆ ಪ್ರಸ್ತಾಪಗಳನ್ನು ಅಳವಡಿಸುವುದರ ಜೊತೆಗೆ ಎನ್‌ಸಿಆರ್ ಪ್ರದೇಶವನ್ನು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಜೆಟ್ನಲ್ಲಿ ಗಮನ ಹರಿಸಲಿದೆ.