ಹೈದರಾಬಾದ್:ಪೋಖ್ರಾನ್ ಪರಮಾಣು ಪರೀಕ್ಷೆಯ ದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತದೆ. 11 ಮೇ 1998 ರಂದು ಭಾರತ ತನ್ನ ಎರಡನೇ ಪರಮಾಣು ಪರೀಕ್ಷೆ ನಡೆಸಿತ್ತು. ಆ ದಿನವನ್ನೇ ರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತಿದೆ.
ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಎತ್ತಿ ತೋರಿಸುವುದು ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಉದ್ದೇಶವಾಗಿದೆ. ಇಂದಿನ ಕೊರೊನಾ ವೈರಸ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತಂತ್ರಜ್ಞಾನದ ಮಹತ್ವ ಈ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ತಂತ್ರಜ್ಞಾನದ ಪ್ರಾಮುಖ್ಯತೆ ಏನೆಂಬುದು ಕೊರೊನಾ ಮಹಾಮಾರಿಯ ಸಮಯದಲ್ಲಿ ನಮಗೆ ಅರ್ಥವಾಗುತ್ತಿದೆ.
ಕೊರೊನಾ ವೈರಸ್ನ ಮೂರು ಮತ್ತು ನಾಲ್ಕನೆಯ ಅಲೆಗಳು ಬರಬಹುದೆಂಬ ಆತಂಕ ಈಗ ಉಂಟಾಗಿದೆ. ಆದರೂ ತಂತ್ರಜ್ಞಾನದ ಕಾರಣದಿಂದಲೇ ನಾವು ಇಂದು ಕೊರೊನಾ ವಿರುದ್ಧ ಯುದ್ಧ ಮಾಡಲು ಸಾಧ್ಯವಾಗಿದೆ. ಹೀಗಾಗಿ ಮಾನವನ ಜೀವನದಲ್ಲಿ ತಂತ್ರಜ್ಞಾನವನ್ನು ಹೆಚ್ಚು ಸೂಕ್ತವಾಗಿ ಹೇಗೆ ಬಳಸಬಹುದು ಎಂಬುದನ್ನು ಈ ಸಂದರ್ಭದಲ್ಲಿ ಮೌಲ್ಯಮಾಪನ ಮಾಡುವುದು ಅಗತ್ಯ.
ತಂತ್ರಜ್ಞಾನದ ಕೊಡುಗೆಗಳು:ತಂತ್ರಜ್ಞಾನವು ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಪ್ರತಿ ವರ್ಷ ಹೊಸ ಆವಿಷ್ಕಾರಗಳು ಹೊರಬರುತ್ತಿವೆ. ಆದರೆ, ಅದರ ಜೊತೆಗೆ ಕೋವಿಡ್ ವೈರಸ್ ಕೂಡ ಅನಿರೀಕ್ಷಿತವಾಗಿ ತನ್ನ ವೇಗ ಹೆಚ್ಚಿಸಿಕೊಂಡಿದೆ. ಹಿಂದೆ ಈ ರೀತಿ ಯಾವತ್ತೂ ಆಗಿರಲಿಲ್ಲ. ಸದ್ಯ ಲಾಕ್‌ಡೌನ್ ಮತ್ತು ತಂತ್ರಜ್ಞಾನಗಳು ಕೊರೊನಾ ವೈರಸ್ ನಿಯಂತ್ರಿಸಲು ನಮಗೆ ಸಹಾಯಕವಾಗಿವೆ. ಉದಾಹರಣೆಗೆ ನೋಡುವುದಾದರೆ- ಹ್ಯಾಂಡ್ ಫ್ರೀ ಡೋರ್ ಓಪನರ್ನಿಂದ ಆಕ್ಸಿಜನ್ ವೆಂಟಿಲೇಟರ್ವರೆಗೆ ತಂತ್ರಜ್ಞಾನದ ಆವಿಷ್ಕಾರಗಳು ಗಮನಾರ್ಹ ಕೊಡುಗೆ ನೀಡಿವೆ. ತಂತ್ರಜ್ಞಾನದ ಸಹಾಯದಿಂದಲೇ ಇದೆಲ್ಲವೂ ಸಾಧ್ಯವಾಗಿದೆ. ಡಿಜಿಟಲ್ ಪಾವತಿ, ಟೆಲಿಮೆಡಿಸಿನ್, ಆನ್‌ಲೈನ್ ಶಿಕ್ಷಣ, ವರ್ಚುವಲ್ ಮೀಟಿಂಗ್, ಸಂಪರ್ಕವಿಲ್ಲದ ವಿತರಣೆ, ರೋಬೋಟ್‌ಗಳು ಮತ್ತು ಡ್ರೋನ್‌ಗಳ ಬಳಕೆ ಕೂಡ ತಂತ್ರಜ್ಞಾನದ ಕೊಡುಗೆಗಳಾಗಿವೆ.
ತಂತ್ರಜ್ಞಾನದ ಸೂಕ್ತ ಬಳಕೆಗೆ ಅವಕಾಶ ಸೃಷ್ಟಿಸಿದ ಕೊರೊನಾ: ಕೋವಿಡ್ ಸಾಂಕ್ರಾಮಿಕವು ತಂತ್ರಜ್ಞಾನವನ್ನು ಇನ್ನೂ ಹೆಚ್ಚು ಸಮರ್ಪಕವಾಗಿ ಬಳಸಿಕೊಳ್ಳಲು ನಮಗೆ ಹೊಸದೊಂದು ಅವಕಾಶ ನೀಡಿದೆ ಎಂದರೆ ತಪ್ಪಾಗಲಾರದು. ಕೃತಕ ಬುದ್ಧಿಮತ್ತೆ, ಇಂಟರ್ನೆಟ್, ಬಿಗ್ ಡೇಟಾ, ಬ್ಲಾಕ್‌ಚೈನ್, 5ಜಿ, ರೊಬೊಟಿಕ್ಸ್, ಡ್ರೋನ್‌ಗಳು, ಜೀನ್ ಎಡಿಟಿಂಗ್ ಸಹಾಯದಿಂದ ಕೊರೊನಾ ವೈರಸ್ ಪತ್ತೆ ಮಾಡಲು ನಮಗಿಂದು ಸಾಧ್ಯವಾಗಿದೆ. ತಂತ್ರಜ್ಞಾನದ ಸಹಾಯದಿಂದ ಮ್ಯಾಪಿಂಗ್, ಕಣ್ಗಾವಲು, ಸ್ಕ್ರೀನಿಂಗ್, ಪತ್ತೆ, ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗಿದೆ. ಇನ್ನಿ ಲಸಿಕೆ ಅಭಿವೃದ್ಧಿ, ಸಂಪನ್ಮೂಲ ಹಂಚಿಕೆ, ಚಿಕಿತ್ಸೆ, ನಿಯಂತ್ರಣ, ಟ್ರ್ಯಾಕಿಂಗ್, ತಡೆಗಟ್ಟುವಲ್ಲಿ ಕೂಡ ತಂತ್ರಜ್ಞಾನವೇ ಬೇಕು.
ಕೊರೊನಾ ಬಿಕ್ಕಟ್ಟಿನಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಕೆಲ ತಂತ್ರಜ್ಞಾನಗಳು ಹೀಗಿವೆ:
ಟೆಲಿಮೆಡಿಸಿನ್: ಈ ತಂತ್ರಜ್ಞಾನದಿಂದ ರೋಗಿ ಮತ್ತು ಆರೋಗ್ಯ ಕಾರ್ಯಕರ್ತರ ನಡುವೆ ಸಂಪರ್ಕದ ಅಗತ್ಯವಿಲ್ಲದೇ ರೋಗಿಯನ್ನು ತಪಾಸಣೆ ಮಾಡಿ ಔಷಧಿಯ ಸಲಹೆ ನೀಡಬಹುದು. ಇದರಲ್ಲಿ ರಿಯಲ್ ಟೈಮ್ನಲ್ಲಿ ಮಾಹಿತಿ ವಿನಿಮಯ ನಡೆಯುತ್ತದೆ.