ನವದೆಹಲಿ :ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಒಮ್ಮತದಿಂದ ಅಂಗೀಕಾರವಾಗಿದೆ. 2010 ರಲ್ಲಿ ವಿರೋಧಿಸಿದ್ದ ಸಮಾಜವಾದಿ ಪಕ್ಷ, ಆರ್ಜೆಡಿ ಸೇರಿದಂತೆ ಎಲ್ಲ ವಿಪಕ್ಷಗಳು ನಾರಿ ಶಕ್ತಿ ವಂದನಾ ಅಧಿನಿಯಮಕ್ಕೆ ಪೂರ್ಣ ಬೆಂಬಲ ನೀಡಿವೆ. ಆದರೆ, ಎಐಎಂಐಎಂ ಪಕ್ಷದ ಇಬ್ಬರು ಸಂಸದರು ಮಾತ್ರ ಮಸೂದೆಯನ್ನು ತಿರಸ್ಕರಿಸಿದ್ದಾರೆ. ಸದನದಲ್ಲಿ ಹಾಜರಿದ್ದ 456 ಸದಸ್ಯರ ಪೈಕಿ 454 ಸದಸ್ಯರು ಪರವಾಗಿ ಮತ ಹಾಕಿದರೆ, ಎಐಎಂಐಎಂನ ಸಂಸದ ಅಸಾದುದ್ದೀನ್ ಓವೈಸಿ, ಇಮ್ತಿಯಾಜ್ ಜಲೀಲ್ ಅವರು ಮಾತ್ರ ವಿರುದ್ಧವಾಗಿ ಮತ ಹಾಕಿದರು.
ಬಳಿಕ ಇದಕ್ಕೆ ಕಾರಣ ನೀಡಿರುವ ಸಂಸದ ಅಸಾಸುದ್ದೀನ್ ಓವೈಸಿ, ಅಂಗೀಕಾರವಾಗಿರುವ ಮಹಿಳಾ ಮೀಸಲಾತಿ ಮಸೂದೆಯು ಮುಸ್ಲಿಂ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೆ ಸೂಕ್ತ ಒಳಮೀಸಲಾತಿ ನೀಡಿಲ್ಲ. ಹೀಗಾಗಿ ನಮ್ಮ ಪಕ್ಷ ವಿಧೇಯಕವನ್ನು ವಿರೋಧಿಸುತ್ತದೆ ಎಂದು ತಿಳಿಸಿದರು.
ಮಸೂದೆಯು ಮುಸ್ಲಿಂ ವಿರೋಧಿಯಾಗಿದೆ. ಸಮುದಾಯದ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿಲ್ಲ. ಇದು ಸವರ್ಣೀಯ ಮಹಿಳೆಯರಿಗೆ ಮೀಸಲಾದ ಮಸೂದೆಯಂತಿದೆ. ಇತರ ಒಬಿಸಿ ಮತ್ತು ಮುಸ್ಲಿಮರ ಪರವಾಗಿ ಹೋರಾಡಲು ಸಂಸತ್ತಿನಲ್ಲಿ ಇಬ್ಬರು ಸದಸ್ಯರಿದ್ದಾರೆ ಎಂಬುದನ್ನು ದೇಶಕ್ಕೆ ತಿಳಿಸಲು ನಾವು ಅದರ ವಿರುದ್ಧ ಮತ ಚಲಾಯಿಸಿದ್ದೇವೆ ಎಂದು ಹೇಳಿದ್ದಾರೆ.
ವಿರೋಧಕ್ಕೆ ತಾರ್ಕಿಕತೆಯನ್ನು ವಿವರಿಸಿದ ಓವೈಸಿ, ದೇಶದ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಒಬಿಸಿ ಜನರು ಇದ್ದಾರೆ. ಈ ಮಸೂದೆಯ ಹಿಂದಿನ ಆಲೋಚನೆಯು ಆ ಮಹಿಳೆಯರಿಗೆ ಮಾತ್ರ ಮೀಸಲಾತಿ ಒದಗಿಸುವುದಾಗಿದೆ. ಸಂಸತ್ತು ಮತ್ತು ಇತರ ಶಾಸನಸಭೆಗಳಲ್ಲಿ ಉಳಿದ ಸಮುದಾಯದ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡಿಲ್ಲ. ಹಿಂದುಳಿದ ಸಮುದಾಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಸ್ಲಿಂ ಮಹಿಳೆಯರು ತೀರಾ ಕಡಿಮೆ:ಮುಸ್ಲಿಂ ಮಹಿಳೆಯರ ಮೀಸಲಾತಿ ಬಗ್ಗೆ ಮಾತನಾಡಿರುವ ಸಂಸದರು, ದೇಶದಲ್ಲಿ ಮುಸ್ಲಿಂ ಮಹಿಳೆಯರುಜನಸಂಖ್ಯೆಯ ಶೇಕಡಾ 7 ರಷ್ಟಿದೆ. ಆದರೆ, ಸಂಸತ್ತು ಸೇರಿದಂತೆ ರಾಜ್ಯ ವಿಧಾನಸಭೆಗಳಲ್ಲಿ ಅವರ ಪ್ರಾತಿನಿಧ್ಯವು ಕೇವಲ ಶೇಕಡಾ 0.7 ರಷ್ಟು ಮಾತ್ರ ಇದೆ. ಹೆಚ್ಚಿನ ಮೀಸಲಾತಿಯು ಸವರ್ಣೀಯರ ಪಾಲಾಗಿದೆ. ಹೀಗಾಗಿ ನಾವು ಮಸೂದೆಯನ್ನು ಒಪ್ಪುವುದಿಲ್ಲ. ಇದೊಂದು ಮುಸ್ಲಿಂ ವಿರೋಧ ಮಸೂದೆ ಎಂದು ಆಪಾದಿಸಿದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಒದಗಿಸುವ ಕರಡು ಮಹಿಳಾ ಮೀಸಲಾತಿ ವಿಧೇಯಕವನ್ನು ಲೋಕಸಭೆ ಬುಧವಾರ ಸರ್ವಸಮ್ಮತವಾಗಿ ಅಂಗೀಕರಿಸಿತು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಪ್ರಸ್ತಾವನೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಇಂದು ರಾಜ್ಯಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡನೆಗೆ ಬರಲಿದೆ.
ಇದನ್ನೂ ಓದಿ:ಮಹಿಳಾ ಮೀಸಲು ಮಸೂದೆ ಇಂದು ರಾಜ್ಯಸಭೆಗೆ; ಮೀಸಲಾತಿ ಕನಿಷ್ಠ 6 ವರ್ಷ ಸಾಧ್ಯವಿಲ್ಲ! ಯಾಕೆ ಗೊತ್ತೇ?