ನವದೆಹಲಿ:ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ತ್ವರಿತ ನಿರ್ಧಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಶಿವಸೇನೆ (ಯುಬಿಟಿ) ಶಾಸಕ ಸುನೀಲ್ ಪ್ರಭು ಅವರು ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ಶುಕ್ರವಾರ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಪ್ರಭು ಅವರ ಮನವಿ ಮೇರೆ ನೋಟಿಸ್ ಜಾರಿ ಮಾಡಿದೆ.
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಸೇರ್ಪಡೆಗೊಂಡ ಕೆಲವು ದಿನಗಳ ನಂತರ ಪ್ರಭು ಅವರು ಸುಪ್ರೀಂಗೆ ಮನವಿ ಸಲ್ಲಿಸಿದರು. ಅಜಿತ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ (ಎನ್‌ಸಿಪಿ) ಬಂಡಾಯ ಎದ್ದು, ಆಡಳಿತಾರೂಢ ಬಿಜೆಪಿ-ಶಿಂಧೆ ಶಿವಸೇನಾ ಮೈತ್ರಿಕೂಟದೊಂದಿಗೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿದ್ದರು.
" ಮಹಾರಾಷ್ಟ್ರ ವಿಧಾನಸಭೆಯ ತಪ್ಪಿತಸ್ಥ ಸದಸ್ಯರ ವಿರುದ್ಧ ಅನರ್ಹತೆ ಅರ್ಜಿ ಸಂಬಂಧ ಕ್ರಮಕೈಗೊಳ್ಳಲು ಸ್ಪೀಕರ್ ವಿಫಲರಾಗಿದ್ದಾರೆ. ಪ್ರಸ್ತುತ ಸ್ಪೀಕರ್ ಕಾನೂನಿನ ಪ್ರಕಾರ ಹತ್ತನೇ ಅನುಸೂಚಿ ಅಡಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ಕರ್ತವ್ಯವನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ಸ್ಪಷ್ಟವಾಗಿ ತೋರಿಸಿದ್ದಾರೆ" ಎಂದು ಪ್ರಭು ತಮ್ಮ ಮನವಿಯಲ್ಲಿ ತಿಳಿಸಿದ್ದರು. ಪ್ರಸ್ತುತ ಪ್ರಕರಣದಲ್ಲಿ ಸ್ಪೀಕರ್ ಸಂವಿಧಾನದ ಅನುಗುಣವಾಗಿ ನ್ಯಾಯಸಮ್ಮತ ಮತ್ತು ಪಕ್ಷಪಾತವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲವಾದಾಗ, ಹತ್ತನೆಯ ನಿಬಂಧನೆಗಳನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ಸೂಕ್ತ ನಿರ್ದೇಶನಗಳನ್ನು ನೀಡುವುದು ಸಾಂವಿಧಾನಿಕವಾಗಿ ಕಡ್ಡಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.