ಅಹಮದಾಬಾದ್ (ಗುಜರಾತ್): ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷ ಬಿಜೆಪಿ ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.
ಇನ್ನು ಕೆಲವು ಕ್ಷೇತ್ರಗಳಿಗೆ ನಿರೀಕ್ಷೆಯಂತೆ ಹಳೆ ಮುಖಗಳಿಗೆ ಮಣೆ ಹಾಕಿರುವುದನ್ನು ಕಾಣಬಹುದು. ಅಹಮದಾಬಾದ್‌ನಲ್ಲಿನ 16 ಕ್ಷೇತ್ರಗಳಲ್ಲಿ ಒಂದಾದ ನರೋಡಾ ವಿಧಾನಸಭಾ ಕ್ಷೇತ್ರಕ್ಕೆ ಅಚ್ಚರಿ ಎಂಬಂತೆ ಬಿಜೆಪಿ ಮಹಿಳಾ ಅಭ್ಯರ್ಥಿ ಪಾಯಲ್ಬೆನ್ ಮನೋಜ್‌ಕುಮಾರ್ ಕುಕ್ರಾಣಿ ಎಂಬುವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಪಾಯಲ್ ಕುಕ್ರಾಣಿ ಯಾರು:ಮೂಲತಃ ವೈದ್ಯೆಯಾಗಿರುವ (ಅರಿವಳಿಕೆ ತಜ್ಞ) ಪಾಯಲ್ ಮನೋಜಕುಮಾರ್ ಕುಕ್ರಾಣಿ ಅವರು ಬಿಜೆಪಿ ಪಕ್ಷಕ್ಕೆ ಗಣನೀಯ ಕೊಡುಗೆ ನೀಡಿದವರು. ಇವರ ತಂದೆ ಮನೋಜಕುಮಾರ ರೋಗುಮಲ್ ಕುಕ್ರಾಣಿ ಹಲವು ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಸಕ್ರಿಯ ಸದಸ್ಯರಾಗಿದ್ದಾರೆ.
ಡಿಸೆಂಬರ್ 18, 1992 ರಂದು ಜನಿಸಿದ ಪಾಯಲ್ ಕುಕ್ರಾಣಿ, ಮೂಲತಃ ಕುಬೇರನಗರ ಪಾಟಿಯಾದ ಸಿಂಧಿ ಮೂಲದವರು. ಇದೇ ಫೆಬ್ರವರಿಯಲ್ಲಿ ಅವರು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಅನಿಲ್ ಚೌಹಾಣ್ ಎಂಬುವರನ್ನು ವಿವಾಹವಾಗುವ ಹಸೆಮಣೆ ಏರಿದ್ದಾರೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪಾಯಲ್, ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇದರ ಜೊತೆಗೆ ನರೋಡಾ ಕ್ಷೇತ್ರದಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ನೀಡುತ್ತಿರುವುದು ಅವರ ಸಾಮಾಜಿಕ ಕೆಲಸಗಳಿಗೆ ಮಗದೊಂದು ಕನ್ನಡಿ.
ಬಿಜೆಪಿಯಲ್ಲಿ ಪಾಯಲ್ ತಂದೆಯ ಪಾತ್ರ: ಮನೋಜ್ ಕುಮಾರ್ ಕುಕ್ರಾಣಿ ಅವರು ದೇಶ ವಿಭಜನೆಯಾದ ವೇಳೆ ಭಾರತಕ್ಕೆ ಬಂದ ಸಿಂಧಿ ಸಮುದಾಯದವರು. 1980 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡ ಅವರು ಹಲವು ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬಂದವರು.
1985 ರಲ್ಲಿ ಯುವ ಅಧ್ಯಕ್ಷ, 1987 ರಲ್ಲಿ ಉಪಾಧ್ಯಕ್ಷ, 1991 ರಲ್ಲಿ ನಗರ ಖಜಾಂಚಿ, 1992 ರಲ್ಲಿ ವಾರ್ಡ್ ಅಧ್ಯಕ್ಷ, 1994 ರಲ್ಲಿ ನರೋಡಾದ ಜನರಲ್ ಮಿನಿಸ್ಟರ್, 1998 ರಲ್ಲಿ ನರೋಡಾ ಮಂಡಲ ಅಧ್ಯಕ್ಷ ನಂತರ ಸಾಯಿಪುರ ವಾರ್ಡ್ ಅಧ್ಯಕ್ಷ, ಸಿಂಧಿ ಪಂಚಾಯತ್ ಅಧ್ಯಕ್ಷ ಆ ಬಳಿಕ ನರೋಡಾ ವಿಧಾನಸಭಾ ಕ್ಷೇತ್ರದ ಸಿಂಧಿ ಸಮಾಜದ ನಾಯಕರಾಗಿ ಹೊರಹೊಮ್ಮಿದರು.