ಗುವಾಹಟಿ: ಈ ವರ್ಷದ ಎರಡನೇ ಹಂತದ ಪ್ರವಾಹದಲ್ಲಿ ಅಸ್ಸೋಂನ ಹಲವು ಜಿಲ್ಲೆಗಳು ಮುಳುಗಡೆಯಾಗಿವೆ. ಅಸ್ಸೋಂ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಳುಹಿಸಿದ ವರದಿಯ ಪ್ರಕಾರ, ಬ್ರಹ್ಮಪುತ್ರ ನದಿ ಮತ್ತು ಅದರ ಉಪನದಿಗಳ ಪ್ರವಾಹದಿಂದ ಕನಿಷ್ಠ 18 ಜಿಲ್ಲೆಗಳು ಬಾಧಿತವಾಗಿವೆ. ಭಾರೀ ಮಳೆಯಿಂದಾಗಿ ಮಾನಸ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಮಳೆಯ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ನದಿ ವರದಿ ಪ್ರಕಾರ ಸುಮಾರು 74,116 ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ಬಜಾಲಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಒಬ್ಬರು ಸಾವನ್ನಪ್ಪಿದ್ದಾರೆ. ಗೋಲ್ಪಾರಾ ಜಿಲ್ಲೆಯ ಆಜಾದ್ ನಗರ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಗುವಾಹಟಿ ನಗರದಲ್ಲಿ ಇಬ್ಬರು ಭೂಕುಸಿತದಿಂದ ಗಾಯಗೊಂಡಿದ್ದಾರೆ.
ಓದಿ:ಕರಾವಳಿಯಲ್ಲಿ ಮತ್ತೆ ನೆರೆ ಆತಂಕ; ಸನ್ನದ್ಧ ಸ್ಥಿತಿಯಲ್ಲಿ ಎಸ್ಡಿಆರ್ಎಫ್
ಕಮ್ರೂಪ್ ಮೆಟ್ರೋ, ದಿಮಾ ಹಸ್ಸಾವೊ, ಗೋಲ್ಪಾರಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಅಸ್ಸೋಂ , ಮೇಘಾಲಯ ಮತ್ತು ಅರುಣಾಚಲದಲ್ಲಿ ಜೂನ್ 17 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರಿ ಮಳೆ ಮತ್ತು ಪ್ರವಾಹದ ಹಿನ್ನೆಲೆ ಕಾಮ್ರೂಪ್ ಮೆಟ್ರೋ ಜಿಲ್ಲಾಡಳಿತ ಗುರುವಾರ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದೆ. ಪ್ರವಾಹದಿಂದಾಗಿ ಗುವಾಹಟಿ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಿದೆ. ಮಳೆಯ ರುದ್ರ ನರ್ತನಕ್ಕೆ ಅದೇಷ್ಟು ಜೀವಗಳು ಬಲಿಯಾಗುತ್ತವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.