ಮಹೋಬಾ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಕ್ಯಾಂಪಸ್‌ನಲ್ಲಿ ಮಧ್ಯಾಹ್ನದ ಊಟದ ಸೇವಿಸಿದ ನಂತರ 15 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಆದರೆ ಇವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸುವ ಬದಲಾಗಿ ಮಾಟ ಮಂತ್ರ ಮಾಡುವ ತಾಂತ್ರಿಕ ಬಾಬಾನನ್ನು ಕರೆಸಿ ಚಿಕಿತ್ಸೆ ಕೊಡಿಸಿದ ವಿಲಕ್ಷಣ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯರ ಮೈಮೇಲೆ ದೆವ್ವ ಭೂತ ಬಂದಿವೆ ಎಂದು ಭಾವಿಸಿ ತಾಂತ್ರಿಕ್ ಬಾಬಾನನ್ನು ಕರೆಸಲಾಗಿತ್ತು ಎನ್ನಲಾಗ್ತಿದೆ.
ಮಹೋಬಾದ ಪನ್ವಾಡಿ ಡೆವಲಪ್‌ಮೆಂಟ್ ಬ್ಲಾಕ್‌ನ ಮಹುವಾ ಗ್ರಾಮದಲ್ಲಿರುವ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನದ ಊಟದ ನಂತರ 15 ವಿದ್ಯಾರ್ಥಿನಿಯರ ಆರೋಗ್ಯ ಹದಗೆಟ್ಟಿತ್ತು. ವಿದ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರು ಬಿಡುಗಡೆಯಾದ ಮೇಲೆ ಶಾಲಾ ಆವರಣಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿಯೇ ಶಾಲೆಗೆ ತಾಂತ್ರಿಕ್ ಬಾಬಾನನ್ನು ಕರೆಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಮಹೋಬಾದ ಕುಲ್ಪಹಾರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅರುಣ್ ದೀಕ್ಷಿತ್, ಸೋಮವಾರ ಈ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಧ್ಯಾಹ್ನದ ಊಟದ ಮಾದರಿಯನ್ನು ಆಹಾರ ನಿರೀಕ್ಷಕರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವಾಸ್ತವಾಂಶಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರ ವಯಸ್ಸು ಒಂಬತ್ತರಿಂದ 13 ವರ್ಷ ಎಂದು ಹೇಳಿದರು.
ಪನ್ವಾಡಿ ಪೊಲೀಸ್ ಠಾಣೆ ಪ್ರಭಾರಿ ಜಯಪ್ರಕಾಶ್ ಉಪಾಧ್ಯಾಯ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ಯಾರನ್ನೂ ಬಂಧಿಸಲಾಗಿಲ್ಲ. ಶಾಲೆಯಲ್ಲಿ ದೆವ್ವ ಇರುವುದರಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ನಂಬಿದ್ದಾರೆಂದು ಬಾಲಕಿಯೊಬ್ಬಳು ಹೇಳಿದ್ದಾಳೆ. ಆಕೆ ಶಾಲೆಯಲ್ಲಿ ಬಿಳಿ ಡ್ರೆಸ್‌ನಲ್ಲಿ ಮಹಿಳೆಯೊಬ್ಬಳನ್ನು ನೋಡಿದ್ದಳು. ಅದು ದೆವ್ವ ಎಂದು ಅವಳು ಭಾವಿಸಿದ್ದಳು. ಮತ್ತೊಂದೆಡೆ, ವೈದ್ಯರು ಹೇಳುವ ಪ್ರಕಾರ ವಿದ್ಯಾರ್ಥಿನಿಯರು ಗಾಬರಿಯಿಂದ ಮೂರ್ಛೆ ಹೋಗಿದ್ದರು ಮತ್ತು ಎಲ್ಲರೂ ತುಂಬಾ ಭಯಪಟ್ಟಿದ್ದರು. ಆದರೆ ಈಗ ಎಲ್ಲರ ಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಶಾಲೆ ಪ್ರವೇಶಿಸುತ್ತಿದ್ದಂತೆ ಮೈ ಮೇಲೆ ದೆವ್ವ ಹಿಡಿದಂತಾಡುವ ಸ್ಟೂಡೆಂಟ್ಸ್.. ಬಾಲಕಿಯರ ವರ್ತನೆಗೆ ಬೆಚ್ಚಿಬಿದ್ದ ಶಿಕ್ಷಕರು!