ಶ್ರೀವೈಕುಂಟಂ ರೈಲು ನಿಲ್ದಾಣ(ತಮಿಳುನಾಡು): ನೆರೆಯ ರಾಜ್ಯ ತಮಿಳುನಾಡು ರಾಜ್ಯ ಪ್ರವಾಹದಿಂದ ತತ್ತರಿಸಿದೆ. ತೀವ್ರ ಮಳೆಯಿಂದಾಗಿ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ತಿರುಚೆಂದೂರು ಎಕ್ಸ್‌ಪ್ರೆಸ್ ರೈಲನ್ನು ನಿಲುಗಡೆ ಮಾಡಲಾಗಿದ್ದು, ರೈಲಿನಲ್ಲಿ 800ಕ್ಕೂ ಅಧಿಕ ಪ್ರಯಾಣಿಕರು ಸಿಲುಕಿದ್ದಾರೆ. ಮೂರನೇ ದಿನವೂ ಆಹಾರವಿಲ್ಲದೆ ಪರದಾಡುತ್ತಿದ್ದಾರೆ.
ತಮಿಳುನಾಡಿನಲ್ಲಿ ಅತೀ ಮಳೆಯ ಕಾರಣ ತಿರುಚೆಂದೂರು-ಚೆನ್ನೈ ನಡುವೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಶ್ರೀವೈಕುಂಡಂ ರೈಲು ನಿಲ್ದಾಣದಲ್ಲಿ ಬಾಕಿಯಾಗಿದೆ. ರೈಲಿನೊಳಗಿರುವ ಸುಮಾರು 800 ಪ್ರಯಾಣಿಕರಲ್ಲಿ 300ರಷ್ಟು ಜನರನ್ನು ದೋಣಿಗಳ ಮೂಲಕ ರಕ್ಷಿಸಿ ಸಮೀಪದ ಮದುವೆ ಮಂಟಪದಲ್ಲಿ ವಸತಿ ಕಲ್ಪಿಸಲಾಗಿದೆ. ಆದರೆ ಉಳಿದಿರುವ 500 ಪ್ರಯಾಣಿಕರ ಸ್ಥಿತಿ ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಕೇವಲ ಊಟ ಮಾತ್ರವಲ್ಲದೆ, ಶೌಚಾಲಯ ಕುಡಿಯುವ ನೀರಿನಂತಹ ವ್ಯವಸ್ಥೆಯಿಲ್ಲದೆ ಪರಿಸ್ಥಿತಿ ಚಿಂತಾಜನಕವಾಗಿದೆ. 3ದಿನದಿಂದಲೂ ಅದೇ ಶೌಚಾಲಯವನ್ನು ನಿತ್ಯ ಬಳಸುವುದರಿಂದ ಆರೋಗ್ಯದ ಸಮಸ್ಯೆಯೂ ಕಾಡಲು ಆರಂಭವಾಗಿದೆ. ವೃದ್ಧರಿಂದ ಹಿಡಿದು ಮಕ್ಕಳವರೆಗೆ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ. ಸಿಲುಕಿದ ಪ್ರಯಾಣಿಕರಲ್ಲಿ ಪೋಷಕರು ತಮಗೆ ಊಟ ಇಲ್ಲದಿದ್ದರೂ ಪರವಾಗಿಲ್ಲ, ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದಷ್ಟು ಬೇಗ ಶ್ರೀವೈಕುಂಟಂ ರೈಲು ನಿಲ್ದಾಣದಿಂದ ತಮ್ಮನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಆಗ್ರಹಿಸುತ್ತಿದ್ದಾರೆ.