ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೇ ಹೊಸ ಸಂಸತ್ ಭವನವನ್ನು ಉದ್ಘಾಟಿಸುವಂತೆ ಲೋಕಸಭಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ. ಈ ಅರ್ಜಿಯನ್ನು ಏಕೆ ಮತ್ತು ಹೇಗೆ ಸಲ್ಲಿಸಲಾಗಿದೆ ಎಂಬುದನ್ನು ನ್ಯಾಯಾಲಯವು ಅರ್ಥಮಾಡಿಕೊಂಡಿದೆ ಮತ್ತು ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಈ ಅರ್ಜಿಯನ್ನು ಪರಿಗಣಿಸಲು ನಾವು ಒಪ್ಪುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಪಿಎಸ್ ನರಸಿಂಹ ಅವರ ಪೀಠವು ಅರ್ಜಿದಾರರ ವೈಯಕ್ತಿಕ ವಕೀಲ ಜಯ ಸುಕಿನ್ ಅವರಿಗೆ ತಿಳಿಸಿತು.
ಆರ್ಟಿಕಲ್ 79 ರ ಅಡಿಯಲ್ಲಿ ರಾಷ್ಟ್ರಪತಿಯವರು ದೇಶದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದಾರೆ ಮತ್ತು ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಬೇಕಿತ್ತು. ಆದಾಗ್ಯೂ ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಲು ಬಯಸದಿದ್ದರೆ, ಅದನ್ನು ಹಿಂಪಡೆಯಲು ಅವಕಾಶ ನೀಡಬೇಕೆಂದು ಸುಕಿನ್ ಮನವಿ ಮಾಡಿದರು. ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿ ಹಿಂಪಡೆಯಲು ಅವಕಾಶ ನೀಡಿದರೆ ಅವರು ಹೈಕೋರ್ಟ್‌ನಲ್ಲಿ ಇದೇ ಅರ್ಜಿ ಸಲ್ಲಿಸುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ನಂತರ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಪರಿಗಣಿಸಿ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು. ರಾಷ್ಟ್ರಪತಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಲೋಕಸಭೆಯ ಸೆಕ್ರೆಟರಿಯೇಟ್ ಮತ್ತು ಭಾರತ ಗಣರಾಜ್ಯವು ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಮಧ್ಯೆ ರಾಷ್ಟ್ರಪತಿಯವರೇ ಭವನ ಉದ್ಘಾಟಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.