ಮಂಚಿರ್ಯಾಲ, ತೆಲಂಗಾಣ: ಜಿಲ್ಲೆಯಲ್ಲಿ ಅವಮಾನವೀಯ ಘಟನೆಯೊಂದು ನಡೆದಿದೆ. ಬೇರೆಯವರ ಎತ್ತುಗಳು ತಮ್ಮ ಹೊಲದಲ್ಲಿ ಮೇಯ್ದಿವೆ ಎಂದು ಆ ಎತ್ತುಗಳ ಮಾಲೀಕನನ್ನು ತನ್ನ ಮನೆ ಮುಂದೆ ಇರುವ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಏನಿದು ಪ್ರಕರಣ?: ಕೋಟಪಲ್ಲಿ ಮಂಡಲದ ಶೆಟ್ಪಲ್ಲಿ ಗ್ರಾಮದ ನಿವಾಸಿ ದುರ್ಗಂ ಬಾಪು ಪ್ರತಿನಿತ್ಯ ತಮ್ಮ ಎತ್ತುಗಳನ್ನು ಮೇಯಿಸಲು ತೆರಳುತ್ತಿದ್ದರು. ಈ ವೇಳೆ, ಅದೇ ಗ್ರಾಮದ ನಿವಾಸಿ ರಾಂ ರೆಡ್ಡಿ ಅವರ ಹೊಲಕ್ಕೆ ಎತ್ತುಗಳು ನುಗ್ಗಿವೆ. ಹೊಲದಲ್ಲಿದ್ದ ಬೆಳೆಗಳನ್ನು ತಿಂದು ಹಾಕಿವೆ. ಈ ವಿಷಯ ರಾಂ ರೆಡ್ಡಿಗೆ ಗೊತ್ತಾಗಿ ಎತ್ತುಗಳನ್ನು ತಮ್ಮ ಮನೆಯ ಮುಂದೆ ಕಟ್ಟಿದ್ದಾರೆ. ಈ ಎತ್ತುಗಳನ್ನು ಬಿಡಿಸಿಕೊಳ್ಳಲು ದುರ್ಗಂ ಬಾಪು ಸ್ಥಳಕ್ಕೆ ಬಂದಿದ್ದಾರೆ.
ಮನೆಯಲ್ಲಿ ರಾಂ ರೆಡ್ಡಿ ಇಲ್ಲದಿರುವುದನ್ನು ಕಂಡು ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದುರ್ಗಂ ಬಾಪುಗೆ ರಾಂ ರೆಡ್ಡಿ ಎದುರಾಗಿದ್ದಾರೆ. ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿರುವುದನ್ನು ಕಂಡು ರಾಂ ರೆಡ್ಡಿ ಕೋಪಗೊಂಡಿದ್ದಾರೆ. ಈ ವೇಳೆ, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ದುರ್ಗಂ ಬಾಪುರನ್ನು ರಾಂ ರೆಡ್ಡಿ ತನ್ನ ಮನೆಯ ಮುಂದಿರುವ ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.