ಜೆರುಸಲೆಂ :ಇಸ್ರೇಲಿನಲ್ಲಿ ರವಿವಾರ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದರೊಂದಿಗೆ ನೆತನ್ಯಾಹು ಅವರ 12 ವರ್ಷಗಳ ಸುದೀರ್ಘಾವಧಿಯ ಆಡಳಿತ ಅಂತ್ಯವಾಗಲಿದೆ.
ಸಣ್ಣ ಗಾತ್ರದ ಉಗ್ರ ರಾಷ್ಟ್ರೀಯತಾವಾದಿ ಪಕ್ಷದ ಮುಖ್ಯಸ್ಥ ನಫ್ತಾಲಿ ಬೆನೆಟ್ ದೇಶದ ನೂತನ ಪ್ರಧಾನಿಯಾಗಲಿದ್ದಾರೆ. ಆದರೆ, ಇವರು ಅಧಿಕಾರದಲ್ಲಿ ಬಹುಕಾಲ ಉಳಿಯಬೇಕಾದರೆ ಎಡ, ಬಲ ಹಾಗೂ ಮಧ್ಯ ಮಾರ್ಗೀಯ ಹಲವಾರು ಚಿಕ್ಕಪುಟ್ಟ ಪಕ್ಷಗಳ ಮರ್ಜಿ ಕಾಯ್ದುಕೊಂಡಿರುವುದು ಅನಿವಾರ್ಯ.
ನೆತನ್ಯಾಹು ವಿರುದ್ಧ ಒಟ್ಟು ಎಂಟು ಸಣ್ಣ ರಾಜಕೀಯ ಪಕ್ಷಗಳು ಒಂದಾಗಿವೆ. ಈ ಒಕ್ಕೂಟದಲ್ಲಿ ಚಿಕ್ಕದೊಂದು ಅರಬ್ ಪಕ್ಷವೂ ಇದ್ದು, ಇಸ್ರೇಲ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅರಬ್ ಪಕ್ಷವೊಂದು ಆಡಳಿತ ಸರ್ಕಾರದ ಭಾಗವಾಗಲಿದೆ. ಹೊಸ ಸರ್ಕಾರವು ಮಧ್ಯಮ ಮಾರ್ಗದ ಆಡಳಿತವನ್ನು ಅನುಸರಿಸುವ ಸಾಧ್ಯತೆ ಇದ್ದು, ಪ್ಯಾಲೆಸ್ತೇನ್ ಜೊತೆಗೆ ಸಂಘರ್ಷ ಕಡಿಮೆ ಮಾಡುವ ಹಾಗೂ ಅಮೆರಿಕದೊಂದಿಗೆ ಉತ್ತಮ ಸಂಬಂಧವಿಟ್ಟುಕೊಳ್ಳುವ ನೀತಿ ಅನುಸರಿಸಲಿದೆ ಎನ್ನಲಾಗಿದೆ. ಅಲ್ಲದೆ ಹೊಸ ಸರ್ಕಾರವು ಯಾವುದೇ ಹೊಸ ಉಪಕ್ರಮಗಳ ಜಾರಿಗೆ ಮುಂದಾಗದು ಎಂದು ಹೇಳಲಾಗಿದೆ.
ಈಗಲೂ ನೆತನ್ಯಾಹು ಬಲಶಾಲಿ
ಈಗಲೂ ಇಸ್ರೇಲ್ ಸಂಸತ್ತಿನಲ್ಲಿ ನೆತನ್ಯಾಹು ಅವರ ಪಕ್ಷವೇ ಅತಿದೊಡ್ಡ ರಾಜಕೀಯ ಪಕ್ಷವಾಗಿರುವುದರಿಂದ ಹೊಸ ಸರ್ಕಾರವನ್ನು ತಮ್ಮೆಲ್ಲ ಬಲದಿಂದ ಅವರು ವಿರೋಧಿಸಲಿದ್ದಾರೆ. ಸದ್ಯ ಅಧಿಕಾರಕ್ಕೆ ಬರಲಿರುವ ಎಂಟು ಪಕ್ಷಗಳ ಒಕ್ಕೂದಲ್ಲಿನ ಒಂದೇ ಒಂದು ಪಕ್ಷ ಹೊರಗೆ ಹೋದರೆ ಸರ್ಕಾರ ಪತನವಾಗಿ ಮತ್ತೆ ನೆತನ್ಯಾಹು ಅವರಿಗೆ ಅವಕಾಶ ಸಿಗಬಹುದು.