ನವದೆಹಲಿ : ಭಾರತದಲ್ಲಿ ಕೋವಿಡ್ ಅಬ್ಬರದ ಕುರಿತು ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ ನಡೆಸಿದೆ.
ಸದ್ಯ ದೇಶದಲ್ಲಿ ಕೋವಿಡ್ ಸಕಾರಾತ್ಮಕತೆ ಪ್ರಮಾಣ ಸುಮಾರು ಶೇ.21 ರಷ್ಟಿದೆ. ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾ, ಪಂಜಾಬ್, ಅಸ್ಸೋಂ, ಜೆ & ಕೆ, ಗೋವಾ, ಹಿಮಾಚಲ ಪ್ರದೇಶ, ಪುದುಚೇರಿ, ಮಣಿಪುರ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಪ್ರತಿ ದಿನ ಹೊಸ ಪ್ರಕರಣ ಹೆಚ್ಚಾಗಿ ದಾಖಲಾಗುತ್ತಿವೆ.
ನಿತ್ಯ ಅತಿ ಹೆಚ್ಚು ಕೋವಿಡ್ ಕೇಸ್ಗಳು ದೃಢ ಪಡುತ್ತಿರುವ ರಾಜ್ಯಗಳು ಅತಿ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣ ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನ ಮಹಾರಾಷ್ಟ್ರವಾದರೆ, ಎರಡನೆ ಸ್ಥಾನದಲ್ಲಿ ಕರ್ನಾಟಕ ಇದೆ.
ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಆ್ಯಕ್ಟಿವ್ ಕೇಸ್ಗಳಿವೆ? ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ದೆಹಲಿ, ರಾಜಸ್ಥಾನ, ಹರಿಯಾಣ, ಛತ್ತೀಸ್ಗಢ, ಬಿಹಾರ, ಗುಜರಾತ್, ದಿಯು ಮತ್ತು ದಮನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನಿತ್ಯ ಕಡಿಮೆ ಕೊರೊನಾ ಪ್ರಕರಣಗಳನ್ನು ದಾಖಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಒಂದು ಲಕ್ಷ ಆಕ್ಷಿಜನ್ ಸಾಂದ್ರಕಗಳನ್ನು ಸಂಗ್ರಹಿಸಲಾಗುತ್ತಿದೆ. 5,805 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 7,049 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿರುವ 374 ಟ್ಯಾಂಕರ್‌ಗಳನ್ನು ವಿಮಾನಗಳ ಮೂಲಕ ಸಾಗಿಸಲಾಗಿದೆ.
1,407 ಮೆ.ಟನ್ ಹೊಂದಿರುವ 81 ಟ್ಯಾಂಕರ್‌ಗಳನ್ನು ಐಎಎಫ್ ಮೂಲಕ ಆಮದು ಮಾಡಿಕೊಳ್ಳಲಾಗಿದೆ. 157 ವಿಶೇಷ ರೈಲುಗಳಲ್ಲಿ 637 ಎಲ್‌ಎಂಒ ಟ್ಯಾಂಕರ್‌ಗಳನ್ನು ಸಾಗಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
13 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು, 6 ರಾಜ್ಯಗಳಲ್ಲಿ 50,000 ರಿಂದ 1 ಲಕ್ಷ ಮತ್ತು 17 ರಾಜ್ಯಗಳಲ್ಲಿ 50,000 ಕ್ಕಿಂತ ಕಡಿಮೆ ಕೋವಿಡ್ ಸಕ್ರಿಯ ಪ್ರಕರಣಗಳಿವೆ.
ಕೋವಿಡ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ತಪಾಸಣಾ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಏಪ್ರಿಲ್ 30, 2021 ರಂದು 19,45,299 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಕೊರೊನಾ ಟೆಸ್ಟ್ ಮಾಡಿರುವ ದಿನವಾಗಿದೆ ಎಂದು ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಕ್ಷಿಪ್ರ ಆಂಟಿಜೆನ್ ಟೆಸ್ಟ್ಗೆ ಅನುಮತಿಸಲಾಗುವುದು. ಇದಕ್ಕೆ ಯಾವುದೇ ಮಾನ್ಯತೆ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.