ಹೈದರಾಬಾದ್ :ಬಾಲಿವುಡ್ ನಟಿ ಅದಾ ಶರ್ಮಾ ಅಭಿನಯದ "ದಿ ಕೇರಳ ಸ್ಟೋರಿ" ಸಿನೆಮಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ತಮ್ಮ ಅದ್ಭುತ ಅಭಿನಯದ ಮೂಲಕ ಅದಾ ಶರ್ಮಾ ಎಲ್ಲರ ಮನಸ್ಸು ಗೆದ್ದಿದ್ದಾರೆ. ದೇಶದೆಲ್ಲೆಡೆ ಸಿನೆಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಈ ಸಿನೆಮಾಗೆ ತೆರಿಗೆ ಮುಕ್ತಗೊಳಿಸಲಾಗಿದೆ. ಇನ್ನೊಂದೆಡೆ ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಿನೆಮಾವು ಬಿಡುಗಡೆಯಾದ ಕೇವಲ 10 ದಿನದಲ್ಲೇ 135 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಭಾನುವಾರ ಬಾಲಿವುಡ್ ನಟಿ ಅದಾ ಶರ್ಮಾ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ದಿ ಕೇರಳ ಸ್ಟೋರಿ ಸಿನೆಮಾ ನಿರ್ದೇಶಕ ಸುದಿಪ್ತೋ ಸೇನ್ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ದಿ ಕೇರಳ ಸ್ಟೋರಿ ಚಿತ್ರ ತಂಡವು ತೆಲಂಗಾಣದ ಕರೀಂನಗರದಲ್ಲಿ ಹಮ್ಮಿಕೊಂಡಿದ್ದ ಹಿಂದು ಏಕ್ತಾ ಯಾತ್ರೆಗೆ ಆಗಮಿಸುತ್ತಿದ್ದರು. ಈ ವೇಳೆ ಇವರ ವಾಹನ ಅಪಘಾತವಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕರೀಂನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಕ್ತಾ ಯಾತ್ರೆಯನ್ನು ರದ್ದುಗೊಂಡಿದೆ ಎಂದು ತಿಳಿದುಬಂದಿದೆ.
ಅಪಘಾತದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅದಾ ಶರ್ಮಾ, ತಮಗಾಗಿ ಪ್ರಾರ್ಥಿಸಿದ ಎಲ್ಲಾ ಹಿಂಬಾಲಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಮ್ಮ ಚಿತ್ರ ತಂಡದ ಎಲ್ಲರೂ ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಅದಾ ಶರ್ಮಾ, ನಾನು ಚೆನ್ನಾಗಿದ್ದೇನೆ. ನಮ್ಮ ಅಪಘಾತದ ಬಗ್ಗೆ ಹರಡಿರುವ ಸುದ್ದಿಯಿಂದಾಗಿ ತುಂಬಾ ಸಂದೇಶಗಳು, ಕರೆಗಳು ಬರುತ್ತಿವೆ. ನಮ್ಮ ಸಿನೆಮಾ ತಂಡ ಮತ್ತು ಎಲ್ಲರೂ ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.