ಕರ್ನಾಟಕ

karnataka

ETV Bharat / bharat

ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ ಸಿಂಧು: 'ಲಕ್ಕಿ ಡ್ರಾ' ಆಯ್ಕೆ ರದ್ಧತಿ ಕೋರಿ ಸಲ್ಲಿಸಿದ ಅರ್ಜಿ ವಜಾ

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರ ಆಯ್ಕೆಯನ್ನು ರದ್ದು ಮಾಡಲು ಕೋರಿದ್ದ ಅರ್ಜಿ ವಜಾಗೊಂಡಿದೆ.

ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ
ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ

By ETV Bharat Karnataka Team

Published : Nov 9, 2023, 4:23 PM IST

ಎರ್ನಾಕುಲಂ (ಕೇರಳ) :ಪ್ರಸಿದ್ಧ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರ (ಮೇಲ್ಯಾಂತಿ) ಆಯ್ಕೆ ಮತ್ತು ಲಕ್ಕಿ ಡ್ರಾ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್​ ಗುರುವಾರ ವಜಾ ಮಾಡಿದೆ. ಅರ್ಚಕರ ಆಯ್ಕೆಯನ್ನು ರದ್ದು ಮಾಡಲು ಯಾವುದೇ ಕಾರಣಗಳಿಲ್ಲ ಎಂದೂ ಹೇಳಿದೆ.

ಲಕ್ಕಿ ಡ್ರಾ ಮೂಲಕ ನಡೆದ ಮುಖ್ಯ ಅರ್ಚಕರ ಆಯ್ಕೆಯಲ್ಲಿ ಮೋಸವಾಗಿದೆ. 2 ಚೀಟಿಗಳನ್ನು ಮಡಚಿದ್ದರೆ, ಉಳಿದವುಗಳನ್ನು ಸುತ್ತಲಾಗಿದೆ. ಮಡಚಿದ ಚೀಟಿಗಳನ್ನೇ ಡ್ರಾದಲ್ಲಿ ಎತ್ತಲಾಗಿದ್ದು, ಅನ್ಯಾಯವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಆದರೆ, ಇದನ್ನು ಕೋರ್ಟ್​ ತಿರಸ್ಕರಿಸಿದ್ದು, ಆಯ್ಕೆಯನ್ನು ರದ್ದುಪಡಿಸುವ ಬೇಡಿಕೆಯಲ್ಲಿ ಮಧ್ಯಪ್ರವೇಶಿಸಲು ಶಕ್ತ ಕಾರಣವಿಲ್ಲ ಎಂದು ಅರ್ಜಿಯನ್ನು ವಜಾ ಮಾಡಿತು.

ಚೀಟಿ ಮಡಚಿದ್ದು ಆಕಸ್ಮಿಕ:ಅರ್ಚಕರ ಚುನಾವಣೆ ರದ್ದು ಕೋರಿ ತಿರುವನಂತಪುರಂ ಮೂಲದ ಮಧುಸೂಧನ್ ನಂಬೂತಿರಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ ಕೋರ್ಟ್​, ಲಕ್ಕಿ ಡ್ರಾ ವೇಳೆ ಕೆಲವು ಪೇಪರ್‌ಗಳು ಮಡಚಿರುವುದು ಆಕಸ್ಮಿಕ ಎಂದು ಅಮಿಕಸ್ ಕ್ಯೂರಿ ಮತ್ತು ನ್ಯಾಯಾಲಯ ನೇಮಿಸಿದ ವೀಕ್ಷಕರು ನೀಡಿದ ವರದಿಗಳನ್ನು ಪರಿಗಣಿಸಲಾಗಿದೆ. ಈ ಹಿಂದಿನ ವಿಚಾರಣೆಯಲ್ಲಿ ಡ್ರಾ ವೇಳೆ ದೇವಸ್ಥಾನದೊಳಗೆ ಅನ್ಯ ವ್ಯಕ್ತಿಗಳು ಇದ್ದರು ಎಂಬ ವಾದವನ್ನು ಪರಿಗಣಿಸಿತ್ತು.

ಬಳಿಕ ಈ ಬಗ್ಗೆ ತನಿಖೆ ನಡೆಸಲು ವೀಕ್ಷಕರನ್ನು ನೇಮಿಸಿತ್ತು. ಇದೀಗ ವೀಕ್ಷಕರು ವರದಿಯನ್ನು ನೀಡಿದ್ದು, ಆಯ್ಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದೆ. ಅಲ್ಲದೇ, ವೀಕ್ಷಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಲಾಗಿದೆ ಎಂದು ದೇವಸ್ವಂ ಮಂಡಳಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಸರ್ಕಾರವೂ ದೇವಸ್ವಂ ಮಂಡಳಿಯ ನಿಲುವನ್ನು ಬೆಂಬಲಿಸಿದೆ.

ಡ್ರಾಗಾಗಿ ಸಿದ್ಧಪಡಿಸಿದ್ದ ಪೇಪರ್​ಗಳಲ್ಲಿ ಎರಡು ಮಡಚಿ, ಉಳಿದವುಗಳು ಸುತ್ತಿಕೊಂಡಿವೆ ಎಂಬುದು ಆಕಸ್ಮಿಕ. ಡ್ರಾ ವೇಳೆಯ ಸಿಸಿಟಿವಿ ದೃಶ್ಯಾವಳಿ ಮತ್ತು ಚಾನೆಲ್ ದೃಶ್ಯಾವಳಿಗಳನ್ನು ನ್ಯಾಯಾಲಯ ಪರಿಶೀಲಿಸಿದೆ. ಇದರ ಬಳಿಕ ಆಯ್ಕೆ ರದ್ದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿತು.

ಆಯ್ಕೆಯಾದ ಅರ್ಚಕರು:ಮುವಾಟ್ಟುಪುಳ ಎನನಲ್ಲೂರು ಪುತಿಲ್ಲಾತ್ ಮನ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ನೂತನ ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಮಾಲಿಕಪ್ಪುರಂ ಮುಖ್ಯ ಅರ್ಚಕರಾಗಿ ತ್ರಿಶೂರ್ ವಡಕೆಕಾಡ್ ಪೂಂಗಟ್ ಮನದ ಪಿ.ಜಿ.ಮುರಳಿ ಆಯ್ಕೆಯಾಗಿದ್ದಾರೆ.

ಅರ್ಜಿದಾರರ ಪ್ರಮುಖ ಆರೋಪ:ಮುಖ್ಯ ಅರ್ಚಕರನ್ನು ಡ್ರಾ ಮೂಲಕ ಆಯ್ಕೆ ಮಾಡುವ ವೇಳೆ ಅವ್ಯವಹಾರ ನಡೆದಿದೆ. ಮುಖ್ಯ ಅರ್ಚಕರಾಗಿ ಆಯ್ಕೆಯಾದವರ ಹೆಸರಲ್ಲಿ ಬರೆದ ಕಾಗದವನ್ನು ಮಾತ್ರ ಮಡಚಿ, ಇತರರ ಹೆಸರಿದ್ದ ಕಾಗದವನ್ನು ಸುತ್ತಲಾಗಿದೆ. ಮಡಕೆಯನ್ನು ಅಲುಗಾಡಿಸಿದಾಗ ಮಡಿಸಿದ ಕಾಗದವು ಸಹಜವಾಗಿ ಮೇಲಕ್ಕೆ ಏರುತ್ತದೆ. ಅದೇ ಕಾಗದವನ್ನು ಆಯ್ಕೆ ಮಾಡಿ ಡ್ರಾ ಮಾಡಲಾಗಿದೆ. ಹೀಗಾಗಿ, ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯನ್ನೇ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಇದನ್ನೂ ಓದಿ: ಲಕ್ಕಿ ಡ್ರಾ ಮೂಲಕ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ನೂತನ ಪ್ರಧಾನ ಅರ್ಚಕರ ಆಯ್ಕೆ

ABOUT THE AUTHOR

...view details