ಕಾಕಿನಾಡ (ಆಂಧ್ರಪ್ರದೇಶ): ತಮ್ಮ ಮಗಳು ಕಪ್ಪಾಗಿ ಹುಟ್ಟಿರುವ ಕುರಿತ ಶಂಕೆ ಮೇರೆಗೆ ಪತಿಯೋರ್ವ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದು ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೊದಲಿಗೆ ಈ ಮಹಿಳೆಯದ್ದು ಸಹಜ ಸಾವು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಎರಡೂವರೆ ವರ್ಷದ ಮಗುವಿನ ಮಾತುಗಳಿಂದಲೇ ಈ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಒಡಿಶಾದ ಉಮ್ಮರ್ಕೋಟ್ನ ಸಿಲಾಟಿಗಾಂವ್ ಗ್ರಾಮದ ಮಾಣಿಕ್ ಘೋಷ್ ಎಂಬಾತ ಏಳು ವರ್ಷಗಳ ಹಿಂದೆ ಕರಗಾಂವ್ ಗ್ರಾಮದ ಲಿಪಿಕಾ ಮಂಡಲ್ (22) ಎಂಬುವರನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದರು. ಎರಡೂವರೆ ವರ್ಷಗಳ ಹಿಂದೆ ಈ ದಂಪತಿಗೆ ಮಾಹಿ ಎಂಬ ಹೆಣ್ಣು ಮಗು ಹುಟ್ಟಿತ್ತು.
ಆದರೆ, ತಮ್ಮ ಮಗಳು ಕಪ್ಪಾಗಿದ್ದಾಳೆ ಎಂದು ಪತ್ನಿ ಲಿಪಿಕಾ ಮೇಲೆ ಆರಂಭದಿಂದಲೂ ಮಾಣಿಕ್ ಅನುಮಾನ ಪಡುತ್ತಿದ್ದನಂತೆ. ಇದೇ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಈ ವರ್ಷದ ಆರಂಭದಲ್ಲಿ ಮತ್ತೆ ಜಗಳವಾಗಿದ್ದರಿಂದ ಲಿಪಿಕಾ ತನ್ನ ತವರು ಮನೆಗೆ ಬಂದಿದ್ದರು. ಇದಾದ ನಂತರ ಜೂನ್‌ನಲ್ಲಿ ರಾಜಿ ಮಾಡಿ ಲಿಪಿಕಾ ಅವರನ್ನು ಪತಿಯೊಂದಿಗೆ ಕಾಕಿನಾಡಕ್ಕೆ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.
ಏಕಾಏಕಿ ಲಿಪಿಕಾ ಸಾವು: ಇದೇ ತಿಂಗಳ 18ರಂದು ರಾತ್ರಿ ಲಿಪಿಕಾಗೆ ಮೂರ್ಛೆ ಬಂದಿದ್ದಾರೆ ಎಂದು ಮಾಣಿಕ್ ಸ್ನೇಹಿತರ ಸಹಾಯದಿಂದ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಇಷ್ಟರಲ್ಲೇ ಲಿಪಿಕಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆದರೆ, ಲಿಪಿಕಾ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಪತ್ತೆಯಾಗಿವೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಕಾಕಿನಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.