ಆದಿಲಾಬಾದ್, ತೆಲಂಗಾಣ:ಅನುಮಾನ ಎಂಬ ಭೂತಕ್ಕೆ ಎರಡು ಜೀವಗಳು ಬಲಿಯಾಗಿವೆ. ಮದುವೆಯಾದ ಮೂರ್ನಾಲ್ಕು ತಿಂಗಳಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಂದಿದ್ದಾನೆ ಪತಿ.. ಪತ್ನಿಯನ್ನು ಕೊಂದು ಪೊಲೀಸ್ ಠಾಣೆಗೆ ಶರಣಾಗಲು ತ್ತೆರಳುತ್ತಿದ್ದ ವೇಳೆ ಆತನು ಸಹ ಅನಿರೀಕ್ಷಿತವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಪೊಲೀಸ್ ಅಧಿಕಾರಿ ಎಂ.ಅಶೋಕ್ ಹಾಗೂ ಸ್ಥಳೀಯರ ಪ್ರಕಾರ, ಮೇ 11ರಂದು ನಿಜಾಮಾಬಾದ್ ಜಿಲ್ಲೆಯ ಬಾಲ್ಕೊಂಡದ ಚೌಹಾಣ್ ಲಕ್ಷ್ಮಿ ಮತ್ತು ಗೋಪಿಚಂದ್ ಅವರ ಕಿರಿಯ ಪುತ್ರಿ ದೀಪಾ ಅವರು ಆದಿಲಾಬಾದ್ ಉಪನಗರ ಬಂಗಾರಗುಡ್ಡದ ಮೋಹಿತೆ ಅರುಣ್ ಅವರೊಂದಿಗೆ ವಿವಾಹವಾಗಿದ್ದರು. ಮದುವೆಯಾಗಿ ಒಂದು ವಾರದ ಬಳಿಕ ಅರುಣ್ ಪತ್ನಿಗೆ ಅನುಮಾನದಿಂದ ಕಿರುಕುಳ ನೀಡಲಾರಂಭಿಸಿದ್ದ. ಆಗಾಗ ಜಗಳ ಮಾಡುತ್ತಿದ್ದರು. ದೀಪಾ ತನ್ನ ತಂದೆಗೆ ಕರೆ ಮಾಡಿ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದರು. ಹೀಗಾಗಿ ಅವರ ತಂದೆ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆಗಸ್ಟ್ 28ರಂದು ಅರುಣ್ ತನ್ನ ಅತ್ತೆ ಮನೆಗೆ ತೆರಳಿ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಆದಿಲಾಬಾದ್ಗೆ ಕರೆತಂದಿದ್ದ.
ಶುಕ್ರವಾರ ಬೆಳಗ್ಗೆ ಅರುಣ್ ತನ್ನ ಪತ್ನಿಯೊಂದಿಗೆ ಮತ್ತೆ ಜಗಳವಾಡಿದ್ದಾನೆ. ಆಕೆಯ ಕುತ್ತಿಗೆ ಕೊಯ್ದು, ತಲೆಯನ್ನು ಮಂಚಕ್ಕೆ ಜಜ್ಜಿದ್ದರಿಂದ ಗೃಹಿಣಿ ಸಾವನ್ನಪ್ಪಿದ್ದಾಳೆ. ಬಳಿಕ ಅರುಣ್ ಅದಿಲಾಬಾದ್ ಗ್ರಾಮಾಂತರ ಪೊಲೀಸರಿಗೆ ಶರಣಾಗಲು ತೆರಳಿದ್ದನು. ಅರುಣ್ ತಂದೆ ಜೈವಂತ್ ರಾವ್ ತನ್ನ ಮಗನ ಬೈಕ್ ಪತ್ತೆಯಾಗದ ಕಾರಣ ಮಗನಿಗೆ ಕರೆ ಮಾಡಿದ್ದಾರೆ. ಆಗ ಅರುಣ್ ನಾನು ನನ್ನ ಪತ್ನಿಯನ್ನು ಕೊಂದಿದ್ದು, ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ ಎಂದು ತಂದೆ ಜೈವಂತ್ ರಾವ್ಗೆ ತಿಳಿಸಿದ್ದಾನೆ. ಕೂಡಲೇ ನೀನು ಮನೆಗೆ ಬರುವಂತೆ ಜೈವಂತ್ ರಾವ್ ಮಗನಿಗೆ ಸೂಚಿಸಿದ್ದಾರೆ.