ಕರ್ನಾಟಕ

karnataka

ETV Bharat / bharat

ಅಂದು ನೆಹರು... ಇಂದು ಮೋದಿ... ಸೆಂಗೋಲ್ ಚಿನ್ನದ ರಾಜದಂಡದ ಐತಿಹಾಸಿಕ ಹಿನ್ನೆಲೆ ತಿಳಿಯಿರಿ - ರಾಜದಂಡದ ಮೇಲಿದೆ ನಂದಿ

ನೂತನ ಸಂಸತ್ ಭವನದ ಲೋಕಸಭೆಯ ಸ್ಪೀಕರ್ ಪೀಠದ ಬಳಿ ಸೆಂಗೋಲ್ ಚಿನ್ನದ ರಾಜದಂಡ ಇರಿಸಲು ಕೇಂದ್ರ ಸರ್ಕಾರ ಐತಿಹಾಸಿಕ ಮತ್ತು ಮಹತ್ವದ ತೀರ್ಮಾನ ಮಾಡಿದೆ. ಹಾಗಾದರೆ, ಏನಿದು ಸೆಂಗೋಲ್?, ಇದರ ಹಿಂದಿನ ಕಥೆ ಏನು ಎಂಬ ಮಾಹಿತಿ ಇಲ್ಲಿವೆ...

the-history-and-culture-surrounding-the-sceptre-sengol
ಅಂದು ನೆಹರು... ಇಂದು ಮೋದಿ... ಸೆಂಗೋಲ್ ಚಿನ್ನದ ರಾಜದಂಡದ ಐತಿಹಾಸಿಕ ಹಿನ್ನಲೆ ತಿಳಿಯಿರಿ

By

Published : May 24, 2023, 8:06 PM IST

ಹೈದರಾಬಾದ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಲೆ ಎತ್ತಿರುವ ನೂತನ ಸಂಸತ್ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಲೋಕಸಭೆಯ ಸ್ಪೀಕರ್ ಪೀಠದ ಬಳಿ ಸೆಂಗೋಲ್ ಎಂದು ಕರೆಯಲ್ಪಡುವ ಐತಿಹಾಸಿಕ ಚಿನ್ನದ ರಾಜದಂಡವನ್ನು ಇರಿಸಲು ನಿರ್ಧರಿಸಲಾಗಿದೆ.

ಸೆಂಗೋಲ್ ಚಿನ್ನದ ರಾಜದಂಡ

ನೂತನ ಸಂಸತ್ ಭವನ ಉದ್ಘಾಟನೆ ಕುರಿತಂತೆ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರದ ಇತಿಹಾಸದಲ್ಲಿ 'ಸೆಂಗೋಲ್' ಮಹತ್ವವನ್ನು ಒತ್ತಿ ಹೇಳಿದರು. ಸೆಂಗೋಲ್ ಬಗ್ಗೆ ದೇಶದ ಜನತೆಗೆ ಇನ್ನೂ ಅಷ್ಟೊಂದು ಗೊತ್ತಿಲ್ಲ. ದೇಶದ ಜನರು ಸೆಂಗೋಲ್​ ಅನ್ನು ನೋಡಬೇಕು. ಈ ಐತಿಹಾಸಿಕ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಇದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಲಿದೆ ಎಂದು ತಿಳಿಸಿದರು.

ಏನಿದು ಸೆಂಗೋಲ್?: ಸೆಂಗೋಲ್ ಚಿನ್ನದ ರಾಜದಂಡವನ್ನು ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಸ್ವೀಕರಿಸಿದರು. ಇದು ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಂತ್ಯ ಮತ್ತು ಭಾರತೀಯ ಸ್ವ - ಆಡಳಿತಕ್ಕೆ ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ. ಸೆಂಗೋಲ್ ತಮಿಳು ಪದ "ಸೆಮ್ಮೈ"ನಿಂದ ಬಂದಿದೆ. ತಮಿಳಿನಲ್ಲಿ "ಧರ್ಮ" ಎಂದು ಇದರರ್ಥ. ಈ ರಾಜದಂಡವನ್ನು ಒಬ್ಬ ವ್ಯಕ್ತಿಗೆ ವಹಿಸಿದ ಮೇಲೆ, ಆ ವ್ಯಕ್ತಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ಆಡಳಿತವನ್ನು ಉತ್ತೇಜಿಸುವ ಆಳವಾದ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ.

ನೂತನ ಸಂಸತ್ ಭವನ

ಸೆಂಗೋಲ್ ಹಿಂದಿನ ಕಥೆ ಏನು?: ಬ್ರಿಟಿಷ್ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಭಾರತದ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರೊಂದಿಗೆ ವ್ಯವಸ್ಥೆಗಳ ಕುರಿತು ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ಮೌಂಟ್‌ ಬ್ಯಾಟನ್​ ನೆಹರು ಅವರಿಗೆ ಔಪಚಾರಿಕ ಸ್ವಾತಂತ್ರ್ಯದ ಘೋಷಣೆಯಾಗಿ ಕೆಲವು ವಿಶೇಷ ಗುರುತನ್ನು ಸ್ಥಾಪಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ನೆಹರು ಅವರು ತಕ್ಷಣವೇ ಭಾರತದ ಕೊನೆಯ ಗವರ್ನರ್ ಜನರಲ್ ಆಗಿದ್ದ ಸಿ.ರಾಜಗೋಪಾಲಾಚಾರಿ ಅವರನ್ನು ಕೇಳಿದರು. ಆಗ ರಾಜಗೋಪಾಲಾಚಾರಿ ಅವರು ಚಿನ್ನದ ರಾಜದಂಡದ ಬಗ್ಗೆ ಪ್ರಸ್ತಾಪಿಸಿ ಆಸಕ್ತಿದಾಯಕ ತಮಿಳು ಸಂಪ್ರದಾಯದ ಮಾಹಿತಿ ಹಂಚಿಕೊಂಡರು.

ಸೆಂಗೋಲ್ ಚಿನ್ನದ ರಾಜದಂಡ

ಚೋಳ ಸಾಮ್ರಾಜ್ಯದಲ್ಲಿ ಹೊಸ ರಾಜನ ಪಟ್ಟಾಭಿಷೇಕದ ಸಂದರ್ಭದಲ್ಲಿ ನಡೆಯುವ ಆಚರಣೆಗಳ ಬಗ್ಗೆ ರಾಜಗೋಪಾಲಾಚಾರಿಯವರು ನೆಹರು ಅವರಿಗೆ ತಿಳಿಸಿದರು. ಹೊಸ ರಾಜನು ಅರ್ಚಕರಿಂದ ರಾಜದಂಡವನ್ನು ಸ್ವೀಕರಿಸುವ ಪರಂಪರೆ ಇದೆ. ನೀವು (ನೆಹರು) ಕೂಡ ಈ ರಾಜದಂಡವನ್ನು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯದ ಸಂಕೇತವಾಗಿ ಸ್ವೀಕರಿಸಬೇಕು. ಇದಕ್ಕೆ ಪ್ರಧಾನಿ ನೆಹರೂ ಜೊತೆಗೆ ಮೌಂಟ್ ಬ್ಯಾಟನ್ ಕೂಡ ಒಪ್ಪಿದರು ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತೇವೆ.

ಇದೇ ವೇಳೆ ಜವಾಹರಲಾಲ್ ನೆಹರು ರಾಜದಂಡದ ಜವಾಬ್ದಾರಿಯನ್ನು ರಾಜಗೋಪಾಲಾಚಾರಿಯವರಿಗೆ ವಹಿಸಿದರು. ರಾಜಗೋಪಾಲಾಚಾರಿ ಈ ಐತಿಹಾಸಿಕ ಮಹತ್ವದ ಸಂದರ್ಭಕ್ಕಾಗಿ ರಾಜದಂಡವನ್ನು ಸಂಗ್ರಹಿಸುವ ಕಾರ್ಯ ಕೈಗೊಂಡರು. ರಾಜದಂಡದ ವ್ಯವಸ್ಥೆ ಮಾಡಲು ಅವರು ಇಂದಿನ ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಥೀನಂಗೆ ತಲುಪಿದರು. ಆಗ ಮಠಾಧೀಶರು ಸಹ ಸೆಂಗೋಲ್ ನೀಡಲು ಸಮ್ಮತಿಸಿದರು.

ರಾಜದಂಡದ ಮೇಲಿದೆ ನಂದಿ: ಈ ಸೆಂಗೋಲ್​ಅನ್ನು ಆಗಿನ ಮದ್ರಾಸಿನ ಹೆಸರಾಂತ ಆಭರಣ ವ್ಯಾಪಾರಿ ವುಮ್ಮಿಡಿ ಬಂಗಾರು ಚೆಟ್ಟಿ ಅವರು ತಯಾರಿಸಿದ್ದಾರೆ. ಐದು ಅಡಿ ಉದ್ಧದ ರಾಜದಂಡವು ನ್ಯಾಯವನ್ನು ಸಂಕೇತಿಸುವ ''ನಂದಿ'' ಮೂರ್ತಿಯನ್ನು ಒಳಗೊಂಡಿದೆ. ಮಠದ ಹಿರಿಯ ಅರ್ಚಕರು ಮೊದಲಿಗೆ ರಾಜದಂಡವನ್ನು ಲಾರ್ಡ್ ಮೌಂಟ್‌ ಬ್ಯಾಟನ್‌ ಅವರಿಗೆ ಹಸ್ತಾಂತರಿಸಿದರು. ನಂತರ ಅದನ್ನು ಮರಳಿ ಪಡೆದು ಗಂಗಾ ಜಲದಿಂದ ಅರ್ಚಕರು ಶುದ್ಧೀಕರಿಸಿದರು. ಭವ್ಯ ಮೆರವಣಿಗೆಯಲ್ಲಿ ಪ್ರಧಾನಿ ನೆಹರು ಬಳಿಗೆ ತೆಗೆದುಕೊಂಡು ಹೋಗಲಾಯಿತು. ಭಾರತದ ಸ್ವಾತಂತ್ರ್ಯದ ಸಂಕೇತವಾಗಿ ಆಗಸ್ಟ್​ 15ಕ್ಕೆ 15 ನಿಮಿಷ ಬಾಕಿರುವ ಮೊದಲು ಮಧ್ಯರಾತ್ರಿ ರಾಜದಂಡವನ್ನು ಮೌಂಟ್‌ ಬ್ಯಾಟನ್‌ ಅವರಿಂದ ನೆಹರೂ ಸೆಂಗೋಲ್​ ಸ್ವೀಕರಿಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಹೊಸ ಸಂಸತ್ತಿನಲ್ಲಿ ರಾಜದಂಡ ಸ್ಥಾಪನೆ:ಸದ್ಯ ಉತ್ತರ ಪ್ರದೇಶದ ಅಲಹಾಬಾದ್​ ವಸ್ತು ಸಂಗ್ರಹಾಲಯದಲ್ಲಿ ಚಿನ್ನದ ಸೆಂಗೋಲ್ ಇದೆ. ಆದ್ದರಿಂದ ಈ 'ಸೆಂಗೋಲ್'ನ ಇತಿಹಾಸ ಮತ್ತು ಮಹತ್ವವು ಜನರಿಗೆ ಗೊತ್ತಿಲ್ಲ ಎಂಬ ಅಂಶವನ್ನು ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದ್ದಾರೆ. ಹೊಸ ಸಂಸತ್ತಿನ ಕಟ್ಟಡದೊಳಗೆ ರಾಜದಂಡದ ಸ್ಥಾಪನೆಯು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಅದರ ಆಧುನಿಕತೆಯೊಂದಿಗೆ ಸಂಪರ್ಕಿಸುವ ಪ್ರಯತ್ನವಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಶ್ಲಾಘನೀಯವಾಗಿದೆ. ತಮಿಳಿನ ಬುಟಕಟ್ಟು ಜನರಿಂದ ಪ್ರಧಾನಿ ರಾಜದಂಡ ಸ್ವೀಕರಿಸಲಿದ್ದಾರೆ ಎಂದು ಶಾ ತಿಳಿಸಿದ್ದಾರೆ.

ಇದನ್ನೂ ಓದಿ:ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ 19 ಪ್ರತಿಪಕ್ಷಗಳಿಂದ ಬಹಿಷ್ಕಾರ!

ABOUT THE AUTHOR

...view details