ಎರ್ನಾಕುಲಂ: ಪ್ರತಿಭಟನೆ ವೇಳೆ ಕವರಟ್ಟಿಯ ಕಂದಾಯ ಇಲಾಖಾ ಅಧಿಕಾರಿಗಳು ಮಾಲೀಕರಿಗೆ ತಿಳಿಸದೇ ಲಕ್ಷದ್ವೀಪದಲ್ಲಿರುವ ಖಾಸಗಿ ಜಮೀನನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅಭಿವೃದ್ಧಿ ಚಟುವಟಿಕೆಗಳಿಗೆ ಆಡಳಿತದ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ವಿವರಣೆ ನೀಡಿದೆ.
ಮೂರು ಪ್ರದೇಶಗಳನ್ನು ಕಂದಾಯ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ಭೇಟಿಯ ನಂತರ ಕಂದಾಯ ಇಲಾಖೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತು.
ಲಕ್ಷದ್ವೀಪದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಆಡಳಿತಗಾರರು ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಕವರಟ್ಟಿಯಲ್ಲಿ ಆಸ್ಪತ್ರೆ ಸಂಕೀರ್ಣವನ್ನು ಸ್ಥಾಪಿಸಲು ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಭಾಗವಾಗಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಲಕ್ಷದ್ವೀಪದಲ್ಲಿ ಪ್ರತಿಭಟನೆ ಮುಂದುವರಿದಂತೆ ಸರ್ಕಾರ ಈ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಕರಡು ಭೂಸ್ವಾಧೀನ ಕಾಯ್ದೆಯ ವಿರುದ್ಧ ಸಾರ್ವಜನಿಕರಿಂದ ಸುಮಾರು 600 ದೂರುಗಳು ಬಂದಿವೆ. ಲಕ್ಷದ್ವೀಪ ಅಧಿಕಾರಿಗಳನ್ನು ಭೇಟಿಯಾದ ವೇಳೆ ಆಡಳಿತಾಧಿಕಾರಿ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ವೇಗವಾಗಿ ನಡೆಯುತ್ತಿಲ್ಲ ಎಂದು ಟೀಕಿಸಿದ್ದರು. ಇದರ ಬೆನ್ನಲ್ಲೇ ಕಂದಾಯ ಇಲಾಖೆ ಭೂಮಿ ಸ್ವಾಧೀನದಂತಹ ವಿವಾದಾತ್ಮಕ ಕಾರ್ಯಾಚರಣೆಗೆ ಇಳಿದಿದೆ.