ಭದ್ರಾಚಲಂ (ತೆಲಂಗಾಣ):ಭದ್ರಾಚಲಂನಲ್ಲಿ ಗೋದಾವರಿ ಉಕ್ಕಿ ಹರಿಯುತ್ತಿರುವುದರಿಂದ ಕರಾವಳಿ ಪ್ರದೇಶ ಅಪಾಯದಲ್ಲಿದೆ. ಗೋದಾವರಿ ನೀರಿನ ಮಟ್ಟ ಗಂಟೆಗೊಮ್ಮೆ ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆ. ಸದ್ಯ ನೀರಿನ ಮಟ್ಟ 70 ಅಡಿ ದಾಟಿದೆ. ಅಷ್ಟೇ ಅಲ್ಲದೇ 23.40 ಲಕ್ಷ ಕ್ಯೂಸೆಕ್ ನೀರು ಗೋದಾವರಿ ಸೇರುತ್ತಿದೆ. ಪ್ರವಾಹ ಅಪಾಯದ ಮಟ್ಟದಲ್ಲಿ ಇರುವುದರಿಂದ ತಗ್ಗು ಪ್ರದೇಶದ ನಿವಾಸಿಗಳನ್ನು ಈಗಾಗಲೇ ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಭದ್ರಾಚಲಂನ ಸುಮಾರು ಸಾವಿರಾರು ಜನರನ್ನು 9 ಪುನರ್ವಸತಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗೋದಾವರಿ ಇತಿಹಾಸದಲ್ಲಿ ಜುಲೈ ತಿಂಗಳ ಮೊದಲಾರ್ಧದಲ್ಲಿ ಈ ಪ್ರಮಾಣದ ಪ್ರವಾಹ ಉಂಟಾಗಿರುವುದು ಇದು ಎರಡನೇ ಬಾರಿ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಶುಕ್ರವಾರ ಅನಿರೀಕ್ಷಿತ ಪ್ರವಾಹದಿಂದ ಹಾನಿಗೊಳಗಾದ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಗತ್ಯ ಎನ್‌ಡಿಆರ್‌ಎಫ್ ಸಿಬ್ಬಂದಿ, ರಕ್ಷಣಾ ತಂಡಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಲಭ್ಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.