ವಿಜಯನಗರಂ(ಆಂಧ್ರಪ್ರದೇಶ):ಕೇರಳ,ಚಂಢಿಗಡ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ನ ಮೊದಲ ಕೇಸ್ ಇಂದು ಪತ್ತೆಯಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಮೂರನೇ ಹಾಗೂ ಮಹಾರಾಷ್ಟ್ರದಲ್ಲಿ 18ನೇ ಕೇಸ್ ವರದಿಯಾಗಿದೆ. ಈ ಮೂಲಕ ಭಾರತದ ಒಮಿಕ್ರಾನ್ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಐರ್ಲೆಂಡ್ನಿಂದ ಭಾರತಕ್ಕೆ ಬಂದಿದ್ದ ಆಂಧ್ರದ ವಿಜಯನಗರಂ ಮೂಲದ 34 ವರ್ಷದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಹೈದರಾಬಾದ್ನ ಸಿಸಿಎಂಬಿಗೆ ಕಳುಹಿಸಲಾಗಿತ್ತು. ಇದೀಗ ಆತನ ವರದಿ ಪಾಸಿಟಿವ್ ಬಂದಿದೆ. ಇತ್ತ ಇಟಲಿಯಿಂದ ಚಂಢಿಗಡಕ್ಕೆ ಹಿಂದಿರುಗಿದ್ದ 20 ವರ್ಷದ ಯುವಕನಿಗೆ ಒಮಿಕ್ರಾನ್ ಅಂಟಿರುವುದು ದೃಢಪಟ್ಟಿದೆ.
ಇನ್ನು ಇಂಗ್ಲೆಂಡ್ನಿಂದ ಕೇರಳದ ಕೊಚ್ಚಿಗೆ ಬಂದಿದ್ದ ವ್ಯಕ್ತಿಗೆ ಕೂಡ ಒಮಿಕ್ರಾನ್ ತಗುಲಿದ್ದು, ಆತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಇವರ ಹೆಂಡತಿ ಮತ್ತು ತಾಯಿಗೆ ಕೂಡ ಕೋವಿಡ್ ದೃಢಪಟ್ಟಿದ್ದು, ಐಸೋಲೇಷನ್ ವಾರ್ಡ್ನಲ್ಲಿರಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.