ನಾವು ಹೋಗೋ ತುಂಬಾ ಜಾಗಗಳಲ್ಲಿ ನಾವು ಮಹಿಳೆಯರಿಗೆ ಮಾತ್ರ ಎನ್ನುವ ಬೋರ್ಡ್ಗಳನ್ನು ನೋಡುತ್ತೇವೆ. ಹಾಗೆಯೇ ಇಲ್ಲೊಂದು ಲೈಬ್ರರಿ ಕೂಡ ಮಹಿಳೆಯರಿಗೆ ಮಾತ್ರ. ಆದರೆ ಈ ಲೈಬ್ರರಿಗೆ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಭೇಟಿ ನೀಡಬಹುದು. ಇಲ್ಲಿರುವ ಪುಸ್ತಕಗಳನ್ನು ಓದಬಹುದು. ಹಾಗಾದರೆ ಇದು ಹೇಗೆ ಮಹಿಳೆಯರಿಗೆ ಮಾತ್ರ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ನಿಜವಾದ ಸ್ತ್ರೀವಾದದ ಪರಿಕಲ್ಪನೆ.
ಹೌದು ಈ ಲೈಬ್ರರಿಗೆ ಪುರುಷರು ಕೂಡ ಬಂದು ಪುಸ್ತಕಗಳನ್ನು ಓದಬಹುದು. ಆದರೂ ಈ ಲೈಬ್ರರಿ ಮಹಿಳೆಯರಿಗೆ ಮಾತ್ರ. ಹೇಗೆಂದರೆ ಈ ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳು ಮಹಿಳೆಯರು ಬರೆದಂತವುಗಳು. ಈ ಲೈಬ್ರರಿಯಲ್ಲಿ ಮಹಿಳೆಯರು ಬರೆದ ಪುಸ್ತಕಗಳಿಗೆ ಮಾತ್ರ ಅವಕಾಶ. ಇಲ್ಲಿನ ಕಬೋರ್ಡ್, ಶೆಲ್ಫ್ಗಳಿಗೆ ಮಹಿಳೆಯರು ಬರೆದ ಪುಸ್ತುಕಗಳಿಗೆ ಮಾತ್ರ ಪ್ರವೇಶ ಅವಕಾಶ. ಆದರೆ, ಆ ಪುಸ್ತಕಗಳನ್ನು ಓದಲು ಯಾರು ಬೇಕಾದರೂ ಬರಬಹುದು.
ಮಹಿಳೆಯರ ಅಸ್ತಿತ್ವದ ಚಿಂತನೆಗಳು ಪ್ರೇರಣೆ: ದೇಶದ ಮೊದಲ ಸ್ತ್ರೀವಾದಿ ಗ್ರಂಥಾಲಯ ಇದು. ಈ ಸ್ತ್ರೀವಾದಿ ಗ್ರಂಥಾಲಯ ಎಲ್ಲಿದೆ ಅಂತೀರಾ.. ಮುಂಬೈ ನಗರದ ಧಾರಾವಿ ಸ್ಲಮ್ನಲ್ಲಿದೆ. ಈ ರೀತಿ ಸ್ತ್ರೀವಾದಿ ಗ್ರಂಥಾಲಯ ನಿರ್ಮಾಣ ಮಾಡುವುದು ಡಾರ್ಜಿಲಿಂಗ್ನ ಮೂವತ್ತೆರಡರ ಹರೆಯದ ಅಕ್ವಿತಾಮಿ ಅವರ ಕನಸು. ಒಬ್ಬ ಹೆಂಡತಿ, ಮಗಳು ಮತ್ತು ತಾಯಿಯಷ್ಟೇ ಆಗಿರುವ ಮಹಿಳೆಯ ಅಸ್ತಿತ್ವದ ಚಿಂತನೆಗಳನ್ನು ಹೊರತರುವ ಯೋಚನೆ ಅಕ್ವಿತಾಮಿ ಅವರಿಗೆ 'ಸೋದರಿಯರ ಗ್ರಂಥಾಲಯ' ಸ್ಥಾಪಿಸುವಂತೆ ಪ್ರೇರೇಪಿಸಿದವು.
ಈ ಗ್ರಂಥಾಲಯ ಸ್ಥಾಪಿಸಿರುವ ಅಕ್ವಿತಾಮಿ ಅವರು ಮೇಲ್ವರ್ಗದವರಾ ಎಂದು ಕೇಳಿದರೆ.. ಖಂಡಿತಾ ಇಲ್ಲ. ಅಕ್ವಿತಾಮಿ ಅವರ ತಂದೆ ತಾಯಿ ಚಹಾ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಅಲ್ಲಿನ ದುಡಿಮೆಯಲ್ಲಿ ಸಾಕಷ್ಟು ಆದಾಯವಿಲ್ಲದೇ ಮುಂಬೈಗೆ ಆಗಮಿಸಿದಾಗ ಅವರಿಗೆ ಧಾರಾವಿಯ ಕೊಳೆಗೇರಿಗಳು ಆಶ್ರಯ ನೀಡಿದವು. ಆ ಸಮಯದಲ್ಲಿ ಅಕ್ವಿತಾಮಿ ಅವರು ವರ್ಣಭೇದ ನೀತಿ ಮತ್ತು ತಾರತಮ್ಯದಂತಹ ನೋವುಗಳನ್ನು ಅನುಭಿವಿಸಿದ್ದರು.