ಮುಂಬೈ:ಉಕ್ರೇನ್‌ನಿಂದ 219 ಪ್ರಯಾಣಿಕರನ್ನು ಹೊತ್ತ ಮೊದಲ ವಿಶೇಷ ವಿಮಾನ ದೇಶದ ವಾಣಿಜ್ಯ ನಗರಿ ಮುಂಬೈಗೆ ಬಂದಿಳಿದಿದೆ. ಇಂದು ಮಧ್ಯಾಹ್ನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ವಿಮಾನ ಭಾರತದತ್ತ ಪ್ರಯಾಣ ಆರಂಭಿಸಿತ್ತು. ಅಪರೇಷ್ ಗಂಗಾ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಅವರು, ರಷ್ಯಾ - ಉಕ್ರೇನ್ ನಡುವಿನ ಬಿಕ್ಕಟ್ಟಿನ ಆರಂಭದಿಂದಲೂ ಉಕ್ರೇನ್‌ನಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯನನ್ನು ಮರಳಿ ದೇಶಕ್ಕೆ ಕರೆತರುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. 219 ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದ್ದಾರೆ. ಇದು ಮೊದಲ ಬ್ಯಾಚ್ ಆಗಿದ್ದು, ಎರಡನೆಯ ಬ್ಯಾಚ್ ಅತಿ ಶೀಘ್ರದಲ್ಲೇ ದೆಹಲಿ ತಲುಪಲಿದೆ. ಅವರೆಲ್ಲರೂ ಮನೆಗೆ ಮರಳುವವರೆಗೆ ನಾವು ಈ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಷ್ಯಾ ದಾಳಿ ಮಧ್ಯೆ ಬಾಂಬ್ ಶೆಲ್ಟರ್ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ!