ನವದೆಹಲಿ:ನಿನ್ನೆ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಸ್ವಾಗತಿಸುವುದಾಗಿ ಪ್ರತಿಭಟನಾ ನಿರತ ರೈತ ಮುಖಂಡರು ಹೇಳಿದ್ದಾರೆ.
ಆದರೆ, ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯ ಮುಂದೆ ಹಾಜರಾಗುವುದಿಲ್ಲ. ಇದು ಸರ್ಕಾರದ ಪರವಾದ ಸಮಿತಿ ಎಂದು ಆರೋಪಿಸಿದ್ದಾರೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ದೆಹಲಿಯ ಗಡಿಯಲ್ಲಿ ಮುಷ್ಕರ ನಡೆಸುತ್ತಿರುವ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸುವುದು ನಮ್ಮ ಉದ್ದೇಶ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ. ಇದೇ ವೇಳೆ ಮುಂದಿನ ಆದೇಶದವರೆಗೆ ಈ ಕಾನೂನುಗಳ ಅನುಷ್ಠಾನಕ್ಕೆ ನಿಷೇಧವನ್ನು ವಿಧಿಸಲಾಗಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ನಾಲ್ಕು ಸದಸ್ಯರ ಸಮಿತಿಯನ್ನು ಸಹ ರಚಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಆದೇಶವನ್ನು ಹಲವಾರು ಪ್ರಸಿದ್ಧ ಕೃಷಿ ಅರ್ಥಶಾಸ್ತ್ರಜ್ಞರು ಸ್ವಾಗತಿಸಿದ್ದಾರೆ.