ಲಾಸ್ ಎಂಜಲಿಸ್(ಯುಎಸ್‌ಎ)ಚೆನ್ನೈ(ತಮಿಳುನಾಡು) : ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ "ದಿ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರವಾಗಿ ಹೊರಹೊಮ್ಮಿದ್ದು, ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಇದು ಎಂಬ ಖ್ಯಾತಿಗೂ ಪಾತ್ರವಾಗಿದೆ.
'ದಿ ಎಲಿಫೆಂಟ್ ವಿಸ್ಪರರ್ಸ್' ಕಥೆ ಏನು?: ಸಾಕ್ಷ್ಯಚಿತ್ರದ ಕಥಾವಸ್ತು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಸುತ್ತ ಸುತ್ತುತ್ತದೆ. ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ ಇದರಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಲಾಗಿದೆ. ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಡಾಕ್ಯುಮೆಂಟರಿಯಲ್ಲಿ ಮೂಡಿಬಂದಿದೆ. ಇದೀಗ 41 ನಿಮಿಷಗಳ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಭಾರತಕ್ಕೆ ಕೀರ್ತಿ ತಂದಿದೆ.
ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ:ಆಸ್ಕರ್ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಮಾತನಾಡಿದ ಕಾರ್ತಿಕಿ ಗೊನ್ಸಾಲ್ವಿಸ್, "ನಮ್ಮ ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಾಂಧವ್ಯ ಹಾಗೂ ಸ್ಥಳೀಯ ಸಮುದಾಯಗಳ ಗೌರವಕ್ಕಾಗಿ ಮತ್ತು ಇತರೆ ಜೀವಿಗಳ ಕುರಿತು ಸಹಾನುಭೂತಿ, ಸಹಬಾಳ್ವೆಯ ಕುರಿತು ಮಾತನಾಡಲು ನಾನು ಇಂದು ಇಲ್ಲಿ ನಿಂತಿದ್ದೇನೆ" ಎಂದು ಹೇಳಿದರು.
'ನನಗೆ ಆನೆ ಗೊತ್ತು, ಆಸ್ಕರ್ ಗೊತ್ತಿಲ್ಲ': "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ಮುಖ್ಯ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ. ಈ ಡಾಕ್ಯುಮೆಂಟರಿ ಆಸ್ಕರ್ ಪ್ರಶಸ್ತಿಯನ್ನು ಪಡೆದಕ್ಕಾಗಿ ಬೆಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ. ರಘು ಎಂಬ ಹೆಸರಿನ ಮರಿ ಆನೆಯನ್ನು ಮೊದಲು ನೋಡಿದಾಗ ಅದರ ಬಾಲ ತುಂಡಾಗಿ ದಯನೀಯ ಸ್ಥಿತಿಯಲ್ಲಿದ್ದು, ಪತಿ ಬೊಮ್ಮನ್ ಬೆಂಬಲದಿಂದ ಮಗುವಿನಂತೆ ಕಾಪಾಡಿದ್ದು ಎಂದು ಬೆಳ್ಳಿ ನೆನಪಿಸಿಕೊಂಡರು.