ಬೊಕಾರೋ (ಜಾರ್ಖಂಡ್):ಸರ್ಕಾರಿ ಸೌಲಭ್ಯಗಳ ಪಡೆಯಲು ಮೃತ ವ್ಯಕ್ತಿಗಳನ್ನೇ ಜೀವಂತವಾಗಿರುವುದಾಗಿ ತೋರಿಸಿ ಮೋಸ ಮಾಡುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಜೀವಂತವಾಗಿರುವ ವ್ಯಕ್ತಿಯನ್ನು ಸರ್ಕಾರಿ ಕಡತಗಳಲ್ಲಿ ಮೃತ ಎಂದು ದಾಖಲಿಸಲಾಗಿದೆ. ಇದರಿಂದ ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಲು ನಿರಂತರವಾಗಿ ಸರ್ಕಾರಿ ಕಚೇರಿಗೆ ಆ ವ್ಯಕ್ತಿ ಅಲೆಯುವಂತೆ ಆಗಿದೆ.
ಜಾರ್ಖಂಡ್ ರಾಜ್ಯದ ಬೊಕಾರೋ ಜಿಲ್ಲೆಯಲ್ಲಿ ಇಂತಹ ವಿಚಿತ್ರ ಘಟನೆ ವರದಿಯಾಗಿದೆ. ಇಲ್ಲಿನ ಕಸ್ಮಾರ್ ಬ್ಲಾಕ್‌ನ ಬಗ್ಡಾ ಗ್ರಾಮದ ನಿವಾಸಿ 70 ವರ್ಷದ ಖೇದನ್ ಘಾನ್ಸಿ ಎಂಬುವವರನ್ನು ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿದೆ. ಈ ಎಡವಟ್ಟಿನ ಪರಿಣಾಮ ಈತನಿಗೆ ಬರುತ್ತಿದ್ದ ಪಿಂಚಣಿ ನಿಂತು ಹೋಗಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳ ಮುಂದೆ ನಿಂತು ನಾನು ಬದುಕಿದ್ದಾನೆ ಎಂಬ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕರಣದ ವಿವರ:70 ವರ್ಷದ ವೃದ್ಧನಾಗಿರುವ ಖೇದನ್ ಘಾನ್ಸಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಯೋಜನೆಯಿಂದ ನಿಯಮಿತವಾಗಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ 2022ರ ಸೆಪ್ಟೆಂಬರ್ ತಿಂಗಳಿಂದ ಪಿಂಚಣಿ ನಿಂತುಹೋಯಿತು. ಏಕಾಏಕಿ ಪಿಂಚಣಿ ಸ್ಥಗಿತಗೊಂಡ ನಂತರ ಬ್ಲಾಕ್ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಆದರೆ, ಅಲ್ಲಿನ ಅಧಿಕಾರಿಗಳ ಹೇಳಿದ ಮಾತುಗಳನ್ನು ಕೇಳಿ ಘಾನ್ಸಿ ಅವರಿಗೆ ಒಂದು ಕ್ಷಣ ಕುಸಿದು ಬೀಳುವಂತೆ ಆಗಿದೆ. ಯಾಕೆಂದರೆ, ಅಧಿಕೃತ ದಾಖಲೆಗಳಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಈಗ ಖೇಡನ್ ಘಾನ್ಸಿ ತನ್ನನ್ನು ತಾನು ಜೀವಂತವಾಗಿ ಸಾಬೀತುಪಡಿಸಲು ನಿರಂತರವಾಗಿ ಓಡುತ್ತಿದ್ದಾರೆ.