ಭಂಡಾರ(ಮಹಾರಾಷ್ಟ್ರ): ಮದ್ಯಪಾನ ಮಾಡಿದ ಬಳಿಕವೇ ಊಟ ಮಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣವಿದೆ. ಮಹಾರಾಷ್ಟ್ರದ ಭಂಡಾರದಲ್ಲಿರುವ ಹುಂಜವೊಂದು ಬೆಳಗಾಗುತ್ತಿದ್ದಂತೆ ಮದ್ಯ ಸೇವನೆ ನಂತರವೇ ಕಾಳು ತಿನ್ನಲು ಶುರು ಮಾಡುತ್ತೆ. ಮದ್ಯ ನೀಡದಿದ್ದರೆ ಹಠ ಹಿಡಿದು ಆಹಾರ, ನೀರು ಕೂಡ ಮುಟ್ಟಲ್ವಂತೆ. ಇದು ನಂಬಲು ತುಸು ಕಷ್ಟವಾದರೂ ಸತ್ಯ ಸಂಗತಿ ಅಂತಿದ್ದಾರೆ ಹುಂಜದ ಮಾಲೀಕರು.
ಪ್ರತಿ ದಿನವೂ ಎಣ್ಣೆ ಬೇಕು ಅಣ್ಣ.. ಮದ್ಯ ಇಲ್ಲದೇ ಆಹಾರ ತಿನ್ನಲ್ಲವಂತೆ ಈ ಹುಂಜ! ಮಹಾರಾಷ್ಟ್ರ ರಾಜ್ಯದ ಭಂಡಾರದ ಪುನರ್ವಸತಿ ಗ್ರಾಮ ಪಿಂಪ್ರಿಯಲ್ಲಿ ಭಾವು ಕಾಟೋರೆ ಎಂಬುವರು ಕೋಳಿ ಸಾಕಾಣಿಕೆ ಮಾಡ್ತಿದ್ದಾರೆ. ವಿವಿಧ ತಳಿಯ ಕೋಳಿ, ಹುಂಜ ಇವರ ಫಾರ್ಮ್ನಲ್ಲಿವೆ. ಅದರಲ್ಲಿರುವ ಹುಂಜವೊಂದು ಪ್ರತಿದಿನ ಮದ್ಯಪಾನ ಮಾಡುತ್ತದೆ. ಇದರಿಂದ ಇಡೀ ಕುಟುಂಬಕ್ಕೆ ದೊಡ್ಡ ತಲೆನೋವು ಶುರುವಾಗಿದೆ.
ಹುಂಜ ಮದ್ಯಪಾನ ಸೇವನೆ ಶುರು ಮಾಡಿದ್ದು ಹೇಗೆ?: ಕಳೆದ ವರ್ಷ ಈ ಹುಂಜ ರೋಗಕ್ಕೆ ತುತ್ತಾಗಿತ್ತು. ಹೀಗಾಗಿ, ಆಹಾರ ತಿನ್ನುವುದನ್ನ ಸಂಪೂರ್ಣವಾಗಿ ತ್ಯಜಿಸಿತ್ತು. ಈ ವೇಳೆ ಗ್ರಾಮದ ವ್ಯಕ್ತಿಯೋರ್ವರು ಪರಿಹಾರವಾಗಿ ಮದ್ಯಪಾನ ನೀಡುವಂತೆ ತಿಳಿಸಿದ್ದರಂತೆ. ಹೀಗಾಗಿ, ಕೆಲ ದಿನಗಳ ಕಾಲ ಮದ್ಯ ನೀಡಿದ್ದಾರೆ. ಸ್ಥಳೀಯ ಅಂಗಡಿಯಲ್ಲಿ ಮದ್ಯ ಸಿಗದಿದ್ದಾಗ ವಿದೇಶಿ ಅಲ್ಕೋಹಾಲ್ ಸಹ ನೀಡಿದ್ದಾರೆ. ರೋಗದಿಂದ ಸಂಪೂರ್ಣವಾಗಿ ಹುಂಜ ಗುಣಮುಖವಾಗಿದೆ. ಆದರೆ, ಕುಡಿತದ ಚಟಕ್ಕೆ ಅಟ್ಟಿಕೊಂಡಿದೆ.
ಮದ್ಯಪಾನ ಇಲ್ಲದೇ ಆಹಾರ ತಿನ್ನಲ್ಲ ಈ ಹುಂಜ ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಬಿಜೆಪಿಯ 14 ಅಭ್ಯರ್ಥಿಗಳು ಸೇರಿ 41 ಮಂದಿ ಅವಿರೋಧ ಆಯ್ಕೆ
ಇದೀಗ ಪ್ರತಿದಿನ ಅಲ್ಕೋಹಾಲ್ ಇಲ್ಲದೇ ಯಾವುದೇ ರೀತಿಯ ಆಹಾರ ಸೇವನೆ ಮಾಡಲ್ಲ. ಹೀಗಾಗಿ, ಮಾಲೀಕರು ಇದಕ್ಕಾಗಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ಖರ್ಚು ಮಾಡುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಶುವೈದ್ಯರು, ಹುಂಜ ಮದ್ಯಪಾನದಿಂದ ಮುಕ್ತಿ ಹೊಂದಬೇಕಾದರೆ, ಅಲ್ಕೋಹಾಲ್ ವಾಸನೆಯ ವಿಟಮಿನ್ ಔಷಧ ನೀಡಲು ಪ್ರಾರಂಭಿಸಬೇಕು. ಕ್ರಮೇಣವಾಗಿ ಮದ್ಯ ನೀಡುವುದನ್ನ ಕಡಿಮೆ ಮಾಡಿದರೆ, ಖಂಡಿತವಾಗಿ ಅದು, ಅಲ್ಕೋಹಾಲ್ ವ್ಯಸನದಿಂದ ಗುಣಮುಖವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.