ಮೋತಿಹಾರಿ (ಬಿಹಾರ): ಕಳೆದ ಮೂರು ದಿನದ ಹಿಂದೆ ಬಿಹಾರದ ಚಂಪಾರಣ್‌ನಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ 22 ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೆ ಚಿಕಿತ್ಸೆ ಫಲಕಾರಿಯಾದೇ ಮತ್ತಷ್ಟು ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 37 ಕ್ಕೆ ತಲುಪಿದೆ. ಜೊತೆಗೆ, ಅಸ್ವಸ್ಥಗೊಂಡ ಸುಮಾರು 20 ಕ್ಕೂ ಅಧಿಕ ಜನ ಜಿಲ್ಲಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ, "ಕರ್ತವ್ಯಲೋಪ ಆರೋಪದ ಮೇಲೆ ತುರ್ಕೌಲಿಯಾ, ಹರಸಿದ್ಧಿ, ಸುಗೌಲಿ ಮತ್ತು ಪಹಾರ್‌ಪುರ ಪೊಲೀಸ್ ಠಾಣೆಗಳ ಎಸ್‌ಎಚ್‌ಒಗಳನ್ನು ಅಮಾನತುಗೊಳಿಸಲಾಗಿದೆ. ಒಂಬತ್ತು ಚೌಕಿದಾರ್‌ಗಳು ಸೇರಿದಂತೆ 11 ಪೊಲೀಸ್ ಸಿಬ್ಬಂದಿ ವಿರುದ್ಧ ಭಾನುವಾರ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾ ಪೊಲೀಸರು ಇದುವರೆಗೆ ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ, ತನಿಖೆ ಮುಂದುವರೆಯುತ್ತಿದೆ. ಕಳೆದ ಹತ್ತು ಗಂಟೆಗಳಲ್ಲಿ ಮತ್ತೆ ನಾಲ್ವರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 26 ಕ್ಕೆ ಏರಿದೆ. ಅಲ್ಲದೇ, ಘಟನೆಯ ನಂತರ ಸಂಬಂಧಿಸಿದ ಪೊಲೀಸ್ ಠಾಣೆಗಳ ಐದು ಸ್ಟೇಷನ್ ಹೌಸ್ ಅಧಿಕಾರಿಗಳನ್ನು ಸಹ ಅಮಾನತುಗೊಳಿಸಲಾಗಿದೆ" ಎಂದು ಹೇಳಿದರು.
ಕೆಲವು ಸ್ಥಳೀಯ ಮೂಲಗಳು ದುರಂತದಲ್ಲಿ ಉಂಟಾದ ಸಾವಿನ ಸಂಖ್ಯೆಯನ್ನು ಮರೆಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಆರೋಪಿಸಿದೆ. ಏಕೆಂದರೆ, ಕೆಲ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಅಥವಾ ಅಧಿಕಾರಿಗಳ ಗಮನಕ್ಕೆ ತಾರದೇ ಮೃತರ ಕುಟುಂಬಗಳು ಅಂತ್ಯಸಂಸ್ಕಾರ ಮಾಡಿದ್ದಾರೆ. ಆಡಳಿತದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಮೃತರನ್ನು ಧ್ರುಪ್ ಪಾಸ್ವಾನ್ (48), ಅಶೋಕ್ ಪಾಸ್ವಾನ್ (44), ರಾಮೇಶ್ವರ್ ರಾಮ್ (35) ಮತ್ತು ಅವರ ತಂದೆ ಮಹೇಂದ್ರ ರಾಮ್, ಚೋಟು ಕುಮಾರ್ (19), ವಿಂದೇಶ್ವರಿ ಪಾಸ್ವಾನ್, ಜೋಖು ಸಿಂಗ್ ಎಂದು ಗುರುತಿಸಲಾಗಿದೆ.