ಇಡುಕ್ಕಿ(ಕೇರಳ): ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಸಿತದ ಪರಿಣಾಮ ಕೇರಳ ಅಕ್ಷರಶಃ ನಲುಗಿದೆ. ಕಳೆದೆರಡು ದಿನದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಳೆ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ.
ಮಳೆಯ ರೌದ್ರನರ್ತನ ಮತ್ತು ಭೂಕುಸಿತ ಸಂಭವಿಸಿದ ಪರಿಣಾಮ ಈವರೆಗೆ ಒಟ್ಟು 23 ಮಂದಿ ಬಲಿಯಾಗಿದ್ದಾರೆ. ಇದುವರೆಗೆ ಕೊಟ್ಟಾಯಂನಲ್ಲಿ 14 ಮತ್ತು ಇಡುಕ್ಕಿಯಲ್ಲಿ 9 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಎರಡು ಶವಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಜೊತೆಗೆ ಸಂಕಷ್ಟಕ್ಕೆ ಸಿಲುಕಿದ್ದ ಇಬ್ಬರು ಚೇತರಿಸಿಕೊಂಡಿದ್ದಾರೆ.
ಕೇರಳದಲ್ಲಿ ಭಾರಿ ಮಳೆಯಿಂದಾದ ಪರಿಸ್ಥಿತಿಯ ಭೀಕರ ದೃಶ್ಯ ಕೇರಳದಲ್ಲಿನ ಪ್ರಾಕೃತಿಕ ವಿಕೋಪದ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ, ನೆರವು ನೀಡುವುದಾಗಿ ಹೇಳಿದ್ದಾರೆ. ತುರ್ತು ನೆರವು, ರಕ್ಷಣಾ ತಂಡ ಸೇರಿದಂತೆ ಕೇರಳದ ಜೊತೆ ಕೇಂದ್ರ ಸರ್ಕಾರ ನಿಲ್ಲಲಿದೆ ಎಂದು ಅಭಯ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಕೇರಳದ ಮಹಾ ಮಳೆ ಹಾಗೂ ಸದ್ಯದ ಪರಿಸ್ಥಿತಿ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದೇನೆ. ಮಳೆ ಹಾಗೂ ಭೂಕುಸಿತದಿಂದ ಹಲವು ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ದೇವರಲ್ಲಿ ಕೇರಳದ ಎಲ್ಲಾ ಜನತೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.