ಸೂರತ್: ಗ್ರೀಷ್ಮಾ ವೆಕಾರಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. ಆರೋಪಿ ಫೆನಿಲ್ ಗೋಯಾನಿಗೆ ಮರಣದಂಡನೆ ವಿಧಿಸಿದೆ. ಅಚ್ಚರಿಯ ವಿಷಯ ಎಂದರೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಹಂತಕ ಫೆನಿಲ್ ಗೋಯಾನಿಯ ಮುಖದಲ್ಲಿ ಯಾವುದೇ ಭಾವನೆಗಳೇ ವ್ಯಕ್ತವಾಗಿರಲಿಲ್ಲ.
ವೆಕಾರಿಯಾ ಕೊಲೆ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು. ವಿಡಿಯೋ ಸಾಕ್ಷ್ಯವೇ ಪ್ರಕರಣದ ಪ್ರಮುಖ ಭಾಗವಾಗಿತ್ತು. ಆರೋಪಿ ಯೋಜಿತ ರೀತಿಯಲ್ಲಿ ಈ ಕೊಲೆ ಮಾಡಿದ್ದಾನೆ ಎಂದು ಗ್ರೀಷ್ಮಾ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಅಂತಿಮವಾಗಿ ಆರೋಪಿಯನ್ನ ಅಪರಾಧಿ ಎಂದು ತೀರ್ಮಾನಿಸಿ ಮರಣದಂಡನೆ ವಿಧಿಸಿದ್ದಾರೆ.
ವಿಚಾರಣೆ ವೇಳೆ ಭಯೋತ್ಪಾದಕ ಅಜ್ಮಲ್ ಕಸಬ್ ಬಗ್ಗೆಯೂ ಕೋರ್ಟ್ ಉಲ್ಲೇಖಿಸಿದೆ. ಪ್ರಕರಣದಲ್ಲಿ ತಾತ್ವಿಕ ಪುರಾವೆಗಳಿವೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿಯು ವೃತ್ತಿಪರ ಅಪರಾಧಿಗಳಂತೆಯೇ ಅಪರಾಧ ಮಾಡಿದ್ದಾನೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ:ಗ್ರೀಷ್ಮಾ ವೆಕಾರಿಯಾಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಫೆನಿಲ್ ಗೋಯಾನಿ ಫೆಬ್ರವರಿ 12 ರಂದು ಸೂರತ್‌ನ ಕಮ್ರೇಜ್‌ನ ಪಸೋದ್ರಾದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ. ಕೊಲೆಗೂ ಮುನ್ನ ಫೆನಿಲ್ ಸಂಪೂರ್ಣ ಯೋಜನೆ ಸಿದ್ಧಪಡಿಸಿಕೊಂಡಿದ್ದ. ಪ್ಲಾನ್ ಪ್ರಕಾರ ಗ್ರೀಷ್ಮಾಳ ಚಿಕ್ಕಪನನ್ನು ಭೇಟಿ ಮಾಡಿದ್ದ. ಮದುವೆ ಆಗುವಂತೆ ಗ್ರೀಷ್ಮಾಳನ್ನು ಮನವೊಲಿಸುವ ಪ್ರಯತ್ನ ಮಾಡಿದ್ದ.
ಆದರೆ ಅದಕ್ಕೆ ಒಪ್ಪದಿದ್ದಾಗ ಚಾಕುವಿನಿಂದ ಅವರ ಮೇಲೆ ಹಲ್ಲೆ ಮಾಡಿದ್ದ ಈ ವೇಳೆ ಬಿಡಿಸಿಕೊಳ್ಳಲು ಬಂದ ಚಿಕ್ಕಪ್ಪ ಹಾಗೂ ಅವಳ ಸಹೋದರನ ಮೇಲೂ ಫೆನಿಲ್ ದಾಳಿ ಮಾಡಿದ್ದ, ಬಳಿಕ ಗ್ರೀಷ್ಮಾಳನ್ನು ಕತ್ತು ಸೀಳಿ ಕೊಲೆ ಮಾಡಿದ್ದ. ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಕೈ ಕತ್ತರಿಸಿಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆನಿಲ್ ಗುಣಮುಖರಾದ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇದನ್ನು ಓದಿ:2017ರ 'ಆಜಾದಿ ಮಾರ್ಚ್' ಪ್ರಕರಣ: ಶಾಸಕ ಜಿಗ್ನೇಶ್ ಮೇವಾನಿಗೆ 3 ತಿಂಗಳ ಜೈಲು ಶಿಕ್ಷೆ