ಹೈದರಾಬಾದ್ (ತೆಲಂಗಾಣ): ಪ್ರಸ್ತುತ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇರುವ ಮೀಸಲಾತಿಯನ್ನು ಕಿತ್ತುಹಾಕಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು.
ಇಲ್ಲಿಗೆ ಸಮೀಪದ ಚೆವೆಲ್ಲಾದಲ್ಲಿ ಭಾನುವಾರ ನಡೆದ ವಿಜಯ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಈ ವರ್ಷಾಂತ್ಯದಲ್ಲಿ ದಕ್ಷಿಣ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಕಳೆದ ಎಂಟು-ಒಂಬತ್ತು ವರ್ಷಗಳಿಂದ ತೆಲಂಗಾಣ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ಬಿಜೆಪಿ ಹೋರಾಟ ನಿಲ್ಲುವುದಿಲ್ಲ ಎಂದರು.
ಕೆಸಿಆರ್ಗೆ ಪ್ರಧಾನಿ ಸ್ಥಾನ ಖಾಲಿ ಇಲ್ಲ:"ಕೆಸಿಆರ್ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಕೆಸಿಆರ್.. ಪ್ರಧಾನಿ ಸ್ಥಾನ ಖಾಲಿ ಇಲ್ಲ. ಮುಂದಿನ ಚುನಾವಣೆಯ ನಂತರವೂ ಮೋದಿಯೇ ಪ್ರಧಾನಿಯಾಗುತ್ತಾರೆ. ಕೆಸಿಆರ್.. ಮೊದಲು ಸಿಎಂ ಸ್ಥಾನ ಭದ್ರಪಡಿಸಿಕೊಂಡರೆ ಸಾಕು. ನಾವು ಅಧಿಕಾರಕ್ಕೆ ಬಂದು ವಿಮೋಚನಾ ದಿನ ಆಚರಿಸುತ್ತೇವೆ. ತೆಲಂಗಾಣದ ಮಜ್ಲಿಸ್‌ಗೆ ಬಿಜೆಪಿ ಹೆದರುವುದಿಲ್ಲ, ಕೆಸಿಆರ್ ಕಾರಿನ ಸ್ಟೀರಿಂಗ್ ಮಜ್ಲಿಸ್ ಕೈಯಲ್ಲಿದೆ ಎಂದು ಅಮಿತ್ ಶಾ ಆರೋಪಿಸಿದರು.
ಪೇಪರ್ ಲೀಕೇಜ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ನಾಯಕ ಸಂಜಯ್ಗೆ ಜೈಲು: ಟಿಎಸ್‌ಪಿಎಸ್‌ಸಿ ಪರೀಕ್ಷೆಯ ಪತ್ರಿಕೆಗಳು ಸೋರಿಕೆಯಾಗುತ್ತಿರುವ ಸಮಸ್ಯೆಗಳ ಬಗ್ಗೆ ಕೆಸಿಆರ್ ಒಂದೇ ಒಂದು ಮಾತನ್ನೂ ಆಡಿಲ್ಲ. ಕೆಸಿಆರ್ ಸಿಎಂ ಯುವಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಸೋರಿಕೆಯಿಂದ ನಿರುದ್ಯೋಗಿಗಳ ಬದುಕು ಕತ್ತಲೆಯಲ್ಲಿ ಮುಳುಗಿದೆ. ಪೇಪರ್ ಲೀಕೇಜ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ರಾಜ್ಯಾರ್ಧಯಕ್ಷ ಬಂಡಿ ಸಂಜಯ್ ಅವರನ್ನು ಜೈಲಿಗೆ ಹಾಕಿದರು. ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜೈಲಿಗೆ ಹೋಗುವ ಭಯವಿಲ್ಲ, 24 ಗಂಟೆಯೊಳಗೆ ಬಂಡಿ ಸಂಜಯ್ ಗೆ ಜಾಮೀನು ಸಿಕ್ಕಿದೆ ಎಂದು ಅಮಿತ್ ಶಾ ತಿಳಿಸಿದರು.