ಕರ್ನಾಟಕ

karnataka

ETV Bharat / bharat

ತೆಲಂಗಾಣ ಸಿಎಂ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಅಧಿಕಾರ ಎಐಸಿಸಿ ಅಧ್ಯಕ್ಷ ಖರ್ಗೆ ಹೆಗಲಿಗೆ - ತೆಲಂಗಾಣಕ್ಕೆ ನೂತನ ಸಾರಥಿ

Revanth Reddy: ತೆಲಂಗಾಣದಲ್ಲಿ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವ ಕಾಂಗ್ರೆಸ್​ ಪಕ್ಷವು ನೂತನ ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷರಿಗೆ ಬಿಟ್ಟಿದೆ.

Telangana Congress
ತೆಲಂಗಾಣ ಕಾಂಗ್ರೆಸ್​

By ETV Bharat Karnataka Team

Published : Dec 4, 2023, 4:03 PM IST

Updated : Dec 4, 2023, 6:02 PM IST

ಹೈದರಾಬಾದ್​(ತೆಲಂಗಾಣ):ಬಹುಮತದೊಂದಿಗೆ ತೆಲಂಗಾಣದಲ್ಲಿ ಜಯಭೇರಿ ಭಾರಿಸಿರುವ ಕಾಂಗ್ರೆಸ್​ ನೂತನ ಸರ್ಕಾರ ರಚಿಸಲು ಸಜ್ಜಾಗಿದೆ. ಒಬ್ಬರು ಮುಖ್ಯಮಂತ್ರಿ ಆಗಿ, ಇಬ್ಬರು ಉಪಮುಖ್ಯಮಂತ್ರಿಗಳೊಂದಿಗೆ ಸರ್ಕಾರ ರೂಪಿಸಲು ಕಾಂಗ್ರೆಸ್​ ಸಿದ್ಧತೆ ಮಾಡಿಕೊಂಡಿದೆ. ಡಿಸೆಂಬರ್​ 6 ಅಥವಾ 9 ರಂದು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಇಂದು ಬೆಳಗ್ಗೆ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್​ ಶಾಸಕಾಂಗ ಪಕ್ಷದ(ಸಿಎಲ್​ಪಿ) ಸಭೆಯಲ್ಲಿ ಸಿಎಂ ಹಾಗೂ ಡಿಸಿಎಂ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿದೆ.

ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ತೆಲಂಗಾಣದ ಉಸ್ತುವಾರಿ ಮಾಣಿಕ್​ ರಾವ್​ ಠಾಕ್ರೆ ಹಾಗೂ ಮತ್ತಿತರರ ಸಮುಖದಲ್ಲಿ ಸಭೆ ನಡೆದಿದೆ. ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಹಾಗೂ ಕೊಡಂಗಲ್​ ಶಾಸಕ ರೇವಂತ್​ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ನಿರೀಕ್ಷೆಯಿತ್ತು. ಆದರೆ ಸಿಎಂ ಸ್ಥಾನಕ್ಕೆ ಸಿಎಲ್​ಪಿ ಮಾಜಿ ನಾಯಕ ಭಟ್ಟಿ ವಿಕ್ರಮಾರ್ಕ ಸೇರಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ.

ಸಭೆಯಲ್ಲಿ ಕರ್ನಾಟಕ ಡಿಸಿಎಂ ಡಿ ಕೆ ಶಿವಕುಮಾರ್​ ಅವರು ಪಿಸಿಸಿ ಅಧ್ಯಕ್ಷ ಹಾಗೂ ಕೊಡಂಗಲ್​ ಶಾಸಕ ರೇವಂತ್​ ರೆಡ್ಡಿ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿ ಎಂದು ಹೇಳಿದ್ದಾರೆ. ಆದರೆ ಸಭೆಯಲ್ಲಿದ್ದ ಬಹುತೇಕ ಶಾಸಕರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರೇ ಆಯ್ಕೆ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಪಕ್ಷದ ಮೂಲಗಳ ಪ್ರಕಾರ ಶಾಸಕ ರೇವಂತ್​ ರೆಡ್ಡಿ ಅವರ ಹೆಸರನ್ನು ಸಿಎಂ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ. ಸಿಎಲ್​ಪಿ ಸಭೆಯ ನಂತರ ಹೈಕಮಾಂಡ್​ನಿಂದ ಅನುಮತಿ ಪಡೆದ ನಂತರ ಅಧಿಕೃತವಾಗಿ ಸಿಎಂ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಇಂದು ಸಂಜೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಕಾಂಗ್ರೆಸ್​ ನಾಯಕ ವಿ ಹನುಮಂತ ರಾವ್ ಹೇಳಿಕೆ:ಬಹುಮತದೊಂದಿಗೆ ಜಯಭೇರಿ ಭಾರಿಸಿರುವ ಕಾಂಗ್ರೆಸ್ ತೆಲಂಗಾಣ ವಿಭಜನೆಯ ನಂತರ ಮೊದಲ ಬಾರಿಗೆ ಬಿಆರ್​ಎಸ್​ ರಹಿತ ಸರ್ಕಾರ ರಚಿಸಲು ಸಿದ್ಧವಾಗಿದೆ. ಇಂದು ಹೈದರಾಬಾದ್​ನಲ್ಲಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯ ನಂತರ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್​ ನಾಯಕ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ವಿ ಹನುಮಂತ ರಾವ್​ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪಕ್ಷದ ಶಾಸಕಾಂಗ ಸಭೆಯಲ್ಲಿ ಏನು ತೀರ್ಮಾನವಾಗುತ್ತದೆಯೋ ಕಾದು ನೋಡಬೇಕಿದೆ. ರೇವಂತ್​ ರೆಡ್ಡಿ ಅವರು ಮಾಡಿರುವ ಎಲ್ಲಾ ಕೆಲಸಗಳಿಂದಾಗಿ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಭಾನುವಾರ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ತೆಲಂಗಾಣದಲ್ಲಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಸ್ಥಳೀಯ ಪಕ್ಷ ಬಿಆರ್​ಎಸ್​ ಅನ್ನು ಸೋಲಿಸಿ, ಕಾಂಗ್ರೆಸ್​ 64 ಸ್ಥಾನಗಳನ್ನು ಗೆದ್ದು, ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಭಾನುವಾರ ರಾತ್ರಿ ಕಾಂಗ್ರೆಸ್​ ನಿಯೋಗ ರಾಜ್ಯಪಾಲೆ ತಮಿಳಸೈ ಸೌಂದರರಾಜನ್​ ಅವರನ್ನು ಭೇಟಿಯಾಗಿದ್ದು, ಸರ್ಕಾರ ರಚನೆಯ ಸಿದ್ಧತೆಯ ಬಗ್ಗೆ ಮಾತನಾಡಿದೆ.

ಇದನ್ನೂ ಓದಿ:ಸರ್ಕಾರ ರಚನೆಗೆ ಕಾಂಗ್ರೆಸ್ ಸಜ್ಜು: ತೆಲಂಗಾಣದ ಎರಡನೇ ಸಿಎಂ ಆಗಿ ಇಂದು ರೇವಂತ್​ ರೆಡ್ಡಿ ಪ್ರಮಾಣವಚನ

Last Updated : Dec 4, 2023, 6:02 PM IST

ABOUT THE AUTHOR

...view details