ನವದೆಹಲಿ:ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪಿಎಂ ಕೇರ್ಸ್ ಅಡಿ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಆರೋಗ್ಯ ವಿಮೆ:ಕೋವಿಡ್ನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಆಯುಷ್ಮಾನ್ ಯೋಜನೆಯಡಿ 18 ವರ್ಷ ಆಗುವವರೆಗೆ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು. ಅದರ ಪ್ರೀಮಿಯಂ ಮೊತ್ತವನ್ನು ಪಿಎಂ ಕೇರ್ಸ್ನಿಂದ ನೀಡಲಾಗುತ್ತದೆ.
ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿ :ಅನಾಥರಾದ ಮಕ್ಕಳಿಗೆ 18 ವರ್ಷ ತುಂಬುತ್ತಲೇ ಪ್ರತಿ ತಿಂಗಳು ಸ್ಟೈಫಂಡ್, 23 ವರ್ಷ ತುಂಬಿದ ಬಳಿಕ ಪಿಎಂ ಕೇರ್ಸ್ನಿಂದ 10 ಲಕ್ಷ ರೂ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಶಿಕ್ಷಣ ವ್ಯವಸ್ಥೆ:ಮಕ್ಕಳು ಈ ದೇಶದ ಭವಿಷ್ಯ. ಅವರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ನಾವು ಮಾಡಲಿದ್ದೇವೆ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದು, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಮಗುವನ್ನು ಖಾಸಗಿ ಶಾಲೆಗೆ ಸೇರಿಸಿದರೆ RTE ಮಾನ ದಂಡಗಳ ಪ್ರಕಾರ ಶುಲ್ಕವನ್ನು ಪಿಎಂ ಕೇರ್ಸ್ ನಿಧಿಯಿಂದಲೇ ನೀಡಲಾಗುವುದು. ಸೈನಿಕ್ ಶಾಲೆ, ನವೋದಯ ವಿದ್ಯಾಲಯ ಮುಂತಾದ ಸರ್ಕಾರಿ ಕೇಂದ್ರಗಳಿಗೆ ಪ್ರವೇಶ ನೀಡಲಾಗುವುದು.
ಉನ್ನತ ಶಿಕ್ಷಣ ಪಡೆಯುವ ಮಕ್ಕಳಿಗೆ ಶಿಕ್ಷಣ ಸಾಲದ ವ್ಯವಸ್ಥೆ ಮಾಡಲಾಗುವುದು. ಆದರೆ ಬಡ್ಡಿಯನ್ನು ಕೇಂದ್ರ ಸರ್ಕಾರ ಪಾವತಿಸಲಿದೆ. ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹತೆ ಇಲ್ಲದ ಮಕ್ಕಳಿಗೆ, ಪಿಎಂ ಕೇರ್ಸ್ ಸಮಾನ ವಿದ್ಯಾರ್ಥಿವೇತನವನ್ನು ನೀಡುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.