ಸಂಭಲ್ (ಉತ್ತರ ಪ್ರದೇಶ): ರಾಜ್ಯದ ಸಂಭಲ್ ಜಿಲ್ಲೆಯಲ್ಲೊಂದು ವಿಚಿತ್ರ ಘಟನೆ ಜರುಗಿದೆ. ತಾನು ಮದುವೆಯಾಗಲಿರುವ ವರನ ಮೂಗು ಚಿಕ್ಕದಾಗಿದೆಯೆಂದು ವಧು ಮದುವೆ ತಿರಸ್ಕರಿಸಿದ ಘಟನೆ ಇದಾಗಿದೆ. ವರನ ಮೂಗು ಚಪ್ಪಟೆ ಮತ್ತು ಚಿಕ್ಕದಾಗಿದೆ, ಆದ್ದರಿಂದ ಆತನನ್ನು ಮದುವೆಯಾಗಲಾರೆ ಎಂದು ವಧು ಹೇಳಿದ್ದಾಳೆ. ವಧು ಹಠ ಹಿಡಿದ ನಂತರ ಹಿರಿಯರು ಆಕೆಯ ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಮದುವೆಗೆ ವಧು ಇಲ್ಲದೆ ವರ ಮದುವೆಯ ಮೆರವಣಿಗೆಯನ್ನು ಮರಳಿ ತೆಗೆದುಕೊಂಡು ಹೋಗಲೇಬೇಕಾಯಿತು.
ಡಿಸೆಂಬರ್ 7ರಂದು ಸಂಭಲ್‌ನ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಮದುವೆ ಮೆರವಣಿಗೆ ನಡೆದಿತ್ತು. ಈ ಸಮಯದಲ್ಲಿ ವಧುವಿನ ಮನೆಯಲ್ಲಿ ಸಂತಸದ ವಾತಾವರಣವಿತ್ತು. ಮದುವೆಗೆ ಬಂದ ಅತಿಥಿಗಳನ್ನು ಸ್ವಾಗತಿಸಲು ಯುವತಿಯರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನೆಯಲ್ಲಿ ಅತಿಥಿಗಳ ದಂಡೇ ನೆರೆದಿತ್ತು. ಈ ನಡುವೆ ವಧುವಿನ ಆ ಒಂದು ಮಾತಿನಿಂದ ಮದುವೆ ಮನೆಯಲ್ಲಿ ಆಕಾಶವೇ ಕಳಚಿ ಬಿದ್ದಂತಾಯಿತು. ವರ ಮತ್ತು ವಧುವಿನ ಕಡೆಯವರಿಬ್ಬರೂ ವಧುವಿನ ಮಾತಿನಿಂದ ಸ್ತಬ್ಧರಾದರು.