ಕರ್ನಾಟಕ

karnataka

ETV Bharat / bharat

EXPLAINER: ಇಂಡೊ-ಪಾಕ್ ಎಲ್​ಒಸಿ ಒಪ್ಪಂದದ ಇತಿಹಾಸ

ಮೊದಲನೆಯದಾಗಿ, ಪಾಕಿಸ್ತಾನ ಸದ್ಯ ವಿಪರೀತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆಂತರಿಕವಾಗಿ ಅಲ್ಲಿ ಸರ್ಕಾರ ವಿರೋಧಿ ಸಂಘರ್ಷಗಳು ಆರಂಭವಾಗಿವೆ. ಎರಡನೆಯದಾಗಿ, ಇಂಡೊ-ಚೀನಾ ಬಿಕ್ಕಟ್ಟಿನ ವಿಷಯ. ಭಾರತದ ಗಡಿಯನ್ನು ಆಕ್ರಮಿಸಿಕೊಳ್ಳಲು ಶತಪ್ರಯತ್ನ ಮಾಡಿದರೂ ವಿಫಲವಾದ ಚೀನಾ ಕೊನೆಗೂ ಭಾರತದ ಮಿಲಿಟರಿ ಶಕ್ತಿಯ ಮುಂದೆ ಮಂಡಿಯೂರಿದ್ದು ಪಾಕಿಸ್ತಾನಕ್ಕೆ ಒಂದು ದೊಡ್ಡ ಪಾಠವಾಯಿತು. ಪಾಕಿಸ್ತಾನದ ಪರಮ ಮಿತ್ರ ಚೀನಾದಂಥ ಪ್ರಬಲ ದೇಶವೇ ಭಾರತವನ್ನು ಎದುರುಹಾಕಿಕೊಳ್ಳುವ ಯತ್ನದಿಂದ ಹಿಂದೆ ಸರಿದಿದ್ದು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದು ಸತ್ಯ.

the analysis of  Indo - Pak  LOC Agreement
ಇಂಡೊ-ಪಾಕ್ ಎಲ್​ಓಸಿ ಒಪ್ಪಂದದ ಇತಿಹಾಸ

By

Published : Mar 3, 2021, 5:10 PM IST

ಹೈದರಾಬಾದ್: ಭಾರತ ಹಾಗೂ ಪಾಕಿಸ್ತಾನಗಳ ಮಧ್ಯದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಬಹುತೇಕ ಪ್ರತಿನಿತ್ಯ ಸಂಘರ್ಷಗಳು ಸಂಭವಿಸುತ್ತಿರುತ್ತವೆ. ಎರಡೂ ದೇಶಗಳ ಸೈನಿಕರು ಪರಸ್ಪರ ಶೆಲ್ಲಿಂಗ್ ನಡೆಸುವುದು, ಗುಂಡು ಹಾರಿಸುವುದು ಸಾಮಾನ್ಯ. ಆದರೆ ಈ ಘರ್ಷಣೆಯಿಂದ ಯಾವುದೇ ತಪ್ಪು ಮಾಡದ ಎರಡೂ ಕಡೆಯ ಸಾಮಾನ್ಯ ನಾಗರಿಕರು ಜೀವ ಕಳೆದುಕೊಳ್ಳುವುದು ಅತ್ಯಂತ ದುಃಖದ ಸಂಗತಿ.

ಆದರೂ ಇತ್ತೀಚೆಗೆ ಗಡಿ ನಿಯಂತ್ರಣ ರೇಖೆಯ ಕುರಿತಾಗಿ ಸಂತಸದ ಸುದ್ದಿಯೊಂದು ಬಂದಿದ್ದು, ಎರಡೂ ಕಡೆಯ ಶಾಂತಿ ಪ್ರಿಯರಿಗೆ ಸಮಾಧಾನ ಮೂಡುವಂತಾಗಿದೆ. ಅದರಲ್ಲೂ ಗಡಿಯ ಗ್ರಾಮಗಳಲ್ಲಿ ವಾಸಿಸುವ ಜನತೆಗೆ ತುಸು ನೆಮ್ಮದಿಯ ಭಾವನೆ ಕಾಣಿಸಿಕೊಳ್ಳುವಂತಾಗಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಗುಂಟ ಕದನ ವಿರಾಮ ನಿಯಮವನ್ನು ಪಾಲಿಸುವುದಾಗಿ 2003ರಲ್ಲಿ ಭಾರತ ಹಾಗೂ ಪಾಕಿಸ್ತಾನಗಳೆರಡೂ ಸಹಿ ಹಾಕಿದ್ದ ಒಪ್ಪಂದವನ್ನು ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಎರಡೂ ದೇಶಗಳು ಸಮ್ಮತಿ ಸೂಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

2003ರ ಕದನವಿರಾಮ ಒಪ್ಪಂದದ ಇತಿಹಾಸ

ಭಾರತ ಹಾಗೂ ಪಾಕಿಸ್ತಾನಗಳ ಮಧ್ಯೆ ನಡೆದ 2003ರ ಕದನವಿರಾಮ ಒಪ್ಪಂದವು ಹಲವಾರು ಏಳು ಬೀಳುಗಳನ್ನು ಕಂಡಿದೆ. ಉಭಯ ದೇಶಗಳು ಕಟ್ಟುನಿಟ್ಟಾಗಿ ಈ ಒಪ್ಪಂದವನ್ನು ಪಾಲಿಸಿಕೊಂಡು ಬಂದಿದ್ದರಿಂದ 2003ರ ನವೆಂಬರ್​ನಿಂದ 2008ರ ನವೆಂಬರ್​ವರೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ನೆಲೆಸಿತ್ತು. ಆದರೆ ಮುಂಬೈ ಮೇಲೆ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಕಡೆಯಿಂದ ಕದನವಿರಾಮದ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗತೊಡಗಿದವು. ಇಲ್ಲಿಂದ ಮುಂದೆ 2012ರವರೆಗೆ ಕದನವಿರಾಮ ಎಂಬುದು ಮರೀಚಿಕೆಯೇ ಆಯಿತು. ಇದರ ನಂತರವೂ 2012 ರಿಂದ ನೋಡಿದರೆ, 2016ನೇ ವರ್ಷ ಬಿಟ್ಟರೆ ಪಾಕಿಸ್ತಾನದ ಕಡೆಯಿಂದ ಕದನ ವಿರಾಮದ ಉಲ್ಲಂಘನೆ ಹೆಚ್ಚಾಗುತ್ತಲೇ ಹೋಯಿತು. 2018 ರಿಂದ 2021ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ 10,752 ಬಾರಿ ಕದನವಿರಾಮವನ್ನು ಉಲ್ಲಂಘಿಸಿದೆ. ಅದರಲ್ಲೂ 2020ರ ಒಂದೇ ವರ್ಷದಲ್ಲಿ ಪಾಕ್ ಕಡೆಯಿಂದ 5133 ಬಾರಿ ಕದನವಿರಾಮ ಉಲ್ಲಂಘಿಸಲಾಗಿದೆ.

ಗಡಿಯಲ್ಲಿ ಶಾಂತಿ ಸ್ಥಾಪನೆಯ ಆರಂಭಿಕ ಯತ್ನಗಳು

ಗಡಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಎರಡೂ ದೇಶಗಳ ಡಿಜಿಎಂಓ (ಡೈರೆಕ್ಟರ್​ ಜನರಲ್ - ಮಿಲಿಟರಿ ವ್ಯವಹಾರಗಳು) ಗಳ ಮಧ್ಯೆ 2013ರಲ್ಲಿ ಎರಡು ಬಾರಿ ಸಂಧಾನ ಸಭೆಗಳು ನಡೆದರೂ ಅವು ಯಶಸ್ವಿಯಾಗಲಿಲ್ಲ. 2018ರಲ್ಲಿ ಮತ್ತೊಮ್ಮೆ ಡಿಜಿಎಂಓ ಮಟ್ಟದಲ್ಲಿ ಮಾತುಕತೆಗಳು ನಡೆದರೂ ಅದರಲ್ಲೂ ಹೇಳಿಕೊಳ್ಳುವಂಥ ಮುನ್ನಡೆ ಸಾಧಿಸಲಾಗಲಿಲ್ಲ.

ಈಗಿನ ಕದನ ವಿರಾಮ ಪಾಲನೆ ಒಪ್ಪಂದ ಘಟಿಸಿದ್ದು ಹೇಗೆ?

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗು ಪಾಕ್‌ ಪ್ರಧಾನಿ ಇಮ್ರಾನ್ ಖಾನ್ (ಸಂಗ್ರಹ ಚಿತ್ರ)

ಈಗ ಉಭಯ ದೇಶಗಳ ಮಧ್ಯೆ ಆಗಿರುವ ಕದನ ವಿರಾಮ ಪಾಲನೆ ಒಪ್ಪಂದವು ಏಕಾಏಕಿ ಘಟಿಸಿದ್ದಲ್ಲ. ಕಳೆದ 3 ತಿಂಗಳಿನಿಂದಲೂ ವಿವಿಧ ಹಂತಗಳಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಇದಕ್ಕಾಗಿ ಭಾರತದಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವ ವಹಿಸಿದ್ದರು. ಆದರೆ ಪಾಕ್ ಕಡೆಯಿಂದ ಇದರ ನೇತೃತ್ವ ಯಾರು ವಹಿಸಬೇಕೆಂಬ ಬಗ್ಗೆ ಅಲ್ಲಿನ ಸರ್ಕಾರ ಗೊಂದಲದಲ್ಲಿತ್ತು. ಇಷ್ಟಾಗಿಯೂ ಶಾಂತಿ ಮರುಸ್ಥಾಪನೆಗೆ ಪಾಕ್ ಆರ್ಮಿ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರ ಬೆಂಬಲವಿತ್ತು ಎಂದು ಮಿಲಿಟರಿ ವಿಶ್ಲೇಷಕರು ಹೇಳುತ್ತಾರೆ.

ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ಶಾಂತಿ ಸ್ಥಾಪನೆಯ ಬಗ್ಗೆ ಪದೇ ಪದೇ ಮಾತನಾಡತೊಡಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. "ಪರಸ್ಪರ ದೇಶಗಳ ಮಧ್ಯದ ಗೌರವ ಹಾಗೂ ಶಾಂತಿಯ ಸಹಬಾಳ್ವೆಗೆ ಬದ್ಧರಾಗಿದ್ದೇವೆ. ಶಾಂತಿ ಮರುಸ್ಥಾಪನೆಗೆ ಇಬ್ಬರೂ ಯತ್ನಿಸಲು ಇದು ಸಕಾಲವಾಗಿದೆ." ಎಂದು ಬಾಜ್ವಾ ಹೇಳಿದ್ದರು.

ಪಾಕಿಸ್ತಾನ ತಾನು ಭಾಗಿಯಾಗುವ ಬಹುತೇಕ ಎಲ್ಲ ಅಂತಾರಾಷ್ಟ್ರೀಯ ಸಭೆಗಳಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುತ್ತಿರುತ್ತದೆ. ಆದರೆ ಫೆಬ್ರವರಿ 18 ರಂದು ನಡೆದ ಕೋವಿಡ್ ನಿರ್ವಹಣಾ ಸಂವಾದದಲ್ಲಿ ಪಾಕ್ ಈ ವಿಷಯವನ್ನು ಎತ್ತದೇ ಅಚ್ಚರಿ ಮೂಡಿಸಿತು. ಇನ್ನು ಶಾಂತಿ ಒಪ್ಪಂದ ಏರ್ಪಡುವ ಕೆಲವೇ ದಿನಗಳ ಮುಂಚೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಾಯುಪ್ರದೇಶದ ಮೂಲಕ ವಿಮಾನಯಾನ ಕೈಗೊಳ್ಳಲು ಭಾರತ ಒಪ್ಪಿಗೆ ನೀಡಿದ್ದು ಗಮನಾರ್ಹ ಸಂಗತಿ.

ಶಾಂತಿ ಸಂಧಾನಕ್ಕೆ ಪಾಕಿಸ್ತಾನ ಒಪ್ಪಿದ್ದೇಕೆ?

ಕಾಶ್ಮೀರ ವಿಷಯದಲ್ಲಿ ಭಾರತವನ್ನು ಏಕಾಂಗಿಯನ್ನಾಗಿಸಲು ಪಾಕ್ ಕಳೆದ ಎರಡು ವರ್ಷಗಳಲ್ಲಿ ಇನ್ನಿಲ್ಲದ ಕಸರತ್ತು ನಡೆಸಿತ್ತು. ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ ಪಿಎಂ ಇಮ್ರಾನ್ ಖಾನ್ ಭಾರತವನ್ನು ದೂಷಿಸುತ್ತಲೇ ಇದ್ದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವುಗೊಳಿಸಿದ್ದನ್ನು ಪ್ರಶ್ನಿಸಿದ್ದ ಇಮ್ರಾನ್, ಮತ್ತೆ 370ನೇ ವಿಧಿಯನ್ನು ಜಾರಿ ಮಾಡುವವರೆಗೆ ಭಾರತದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಇಷ್ಟಾದರೂ ಶಾಂತಿ ಸ್ಥಾಪನೆಗೆ ಪಾಕ್ ಮುಂದಾಗಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಮೊದಲನೆಯದಾಗಿ, ಪಾಕಿಸ್ತಾನ ಸದ್ಯ ವಿಪರೀತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಆಂತರಿಕವಾಗಿ ಅಲ್ಲಿ ಸರ್ಕಾರ ವಿರೋಧಿ ಸಂಘರ್ಷಗಳು ಆರಂಭವಾಗಿವೆ. ಎರಡನೆಯದಾಗಿ, ಇಂಡೊ-ಚೀನಾ ಬಿಕ್ಕಟ್ಟಿನ ವಿಷಯ. ಭಾರತದ ಗಡಿಯನ್ನು ಆಕ್ರಮಿಸಿಕೊಳ್ಳಲು ಶತಪ್ರಯತ್ನ ಮಾಡಿದರೂ ವಿಫಲವಾದ ಚೀನಾ ಕೊನೆಗೂ ಭಾರತದ ಮಿಲಿಟರಿ ಶಕ್ತಿಯ ಮುಂದೆ ಮಂಡಿಯೂರಿದ್ದು ಪಾಕಿಸ್ತಾನಕ್ಕೆ ಒಂದು ದೊಡ್ಡ ಪಾಠವಾಯಿತು. ಪಾಕಿಸ್ತಾನದ ಪರಮ ಮಿತ್ರ ಚೀನಾದಂಥ ಪ್ರಬಲ ದೇಶವೇ ಭಾರತವನ್ನು ಎದುರುಹಾಕಿಕೊಳ್ಳುವ ಯತ್ನದಿಂದ ಹಿಂದೆ ಸರಿದಿದ್ದು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದು ಸತ್ಯ.

ಇದರ ಜೊತೆಗೆ ಬಲೂಚಿಸ್ತಾನದಲ್ಲಿ ತೀವ್ರಗೊಂಡ ಆಂತರಿಕ ದಂಗೆಗಳು ಹಾಗೂ ಅಮೆರಿಕದಲ್ಲಿ ಅಧ್ಯಕ್ಷರ ಬದಲಾವಣೆಯಾದ ನಂತರ ಬದಲಾದ ಪರಿಸ್ಥಿತಿಗಳಿಂದಾಗಿ ಪಾಕ್ ಶಾಂತಿ ಸ್ಥಾಪನೆಗೆ ಅನಿವಾರ್ಯವಾಗಿ ಮುಂದಾಗುವಂತಾಯಿತು.

ಶಾಂತಿ ಒಪ್ಪಂದ ಹಾಗೂ ಪರಿಣಾಮಗಳು

ಸಾಂದರ್ಭಿಕ ಚಿತ್ರ

ಸದ್ಯದ ಶಾಂತಿ ಒಪ್ಪಂದದಿಂದ ಗಡಿ ನಿಯಂತ್ರಣ ರೇಖೆಯ ಗ್ರಾಮಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಆಗಾಗ ನಡೆಯುವ ಗುಂಡಿನ ದಾಳಿಗಳಿಂದ ತಮ್ಮ ಕುಟುಂಬಸ್ಥರು ಕಣ್ಣ ಮುಂದೆಯೇ ಜೀವ ಬಿಡುವ ಸಂದರ್ಭಗಳಿಂದ ಗ್ರಾಮಸ್ಥರು ಸದಾ ಭೀತಿಯಲ್ಲೇ ಇರುವಂತಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಪಾಕ್ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದ ಭಾರತದ 70 ನಾಗರಿಕರು ಪ್ರಾಣ ಕಳೆದುಕೊಂಡಿದ್ದು, 341 ಜನ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಎರಡೂ ದೇಶಗಳ ಮಧ್ಯೆ ಶಾಂತಿ ಮರುಸ್ಥಾಪನೆಯಾದಲ್ಲಿ ಈ ಗ್ರಾಮಸ್ಥರಿಗಿಂತ ಹೆಚ್ಚು ಖುಷಿ ಪಡುವವರು ಮತ್ತಾರೂ ಇಲ್ಲ. ಇನ್ನಾದರೂ ಗುಂಡಿನ ಮೊರೆತ ನಿಂತು ಗಡಿ ನಿಯಂತ್ರಣ ರೇಖೆಯ ಬಳಿ ಶಾಂತಿ ನೆಲೆಸಲಿ ಎಂಬುದು ಎಲ್ಲರ ಅಪೇಕ್ಷೆಯಾಗಿದೆ.

ABOUT THE AUTHOR

...view details