ಅಹ್ಮದ್‌ನಗರ(ಮಹಾರಾಷ್ಟ್ರ):ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಆಂದೋಲನ ನಡೆಸುತ್ತಿರುವ ರೈತರು ಪಾಕಿಸ್ತಾನದಿಂದ ಬಂದಿದ್ದಾರೆಯೇ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹೊಸ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್, ಹರಿಯಾಣ ಸೇರಿದಂತೆ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಸರ್ಕಾರ ಮತ್ತು ರೈತರ ನಡುವೆ ನೇರ ಮಾತುಕತೆ ನಡೆಯದ ಕಾರಣ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಅಣ್ಣಾ ಹಜಾರೆ,ಸಾಮಾಜಿಕ ಕಾರ್ಯಕರ್ತ ರೈತರ ಆಂದೋಲನ ಕುರಿತು ಅಣ್ಣಾ ಹಜಾರೆ ನೇರವಾಗಿ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ನೀವು ಮತಗಳನ್ನು ಕೇಳಲು ರೈತರ ಬಳಿಗೆ ಹೋಗಲು ಸಾಧ್ಯವಾದರೆ, ರೈತರ ಆಂದೋಲನ ನಡೆಯುತ್ತಿರುವಾಗ ಯಾಕೆ ಅವರೊಂದಿಗೆ ಹೋಗಿ ಚರ್ಚಿಸಬಾರದು ಎಂದಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಆಂದೋಲನ ನಡೆಸುತ್ತಿರುವ ರೈತರು ಪಾಕಿಸ್ತಾನದಿಂದ ಬಂದಿದ್ದಾರೆಯೇ? ಅವರು ನಮ್ಮ ದೇಶದವರಲ್ಲವೆ? ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ಚಳವಳಿಗೆ ನನ್ನ ಸಂಪೂರ್ಣ ಬೆಂಬಲ
ಕೃಷಿಯನ್ನು ಅವಲಂಭಿಸಿರುವಂತ ದೇಶದಲ್ಲಿ ರೈತರನ್ನು ಈ ರೀತಿ ನಡೆಸಿಕೊಳ್ಳುವುದು ಸೂಕ್ತವಲ್ಲ. ಚುನಾವಣೆ ಬಂದಾಗ ರಾಜಕಾರಣಿಗಳು ರೈತರ ಬಳಿಗೆ ಹೋಗುತ್ತಾರೆ. ಕೆಲವೊಮ್ಮೆ ನೇರವಾಗಿ ಮನೆಗೆ ಹೋಗಿ ಮತ ಕೇಳುತ್ತಾರೆ. ಹಾಗಾದರೆ ಸರ್ಕಾರ ಅವರ ಬೇಡಿಕೆಗಳ ಬಗ್ಗೆ ಏಕೆ ಅವರೊಂದಿಗೆ ಚರ್ಚಿಸುತ್ತಿಲ್ಲ? ಘಟನೆಯಲ್ಲಿ ಓರ್ವ ರೈತ ಕೂಡ ಸಾವನ್ನಪ್ಪಿದ್ದಾನೆ. ಆದರೂ ರೈತರು ಇನ್ನೂ ಸಂಯಮದಿಂದ ಆಂದೋಲನ ನಡೆಸುತ್ತಿದ್ದಾರೆ. ನಾನು ಈ ಆಂದೋಲನವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ" ಎಂದು ಹೇಳಿದ್ದಾರೆ.