ಥಾಣೆ (ಮಹಾರಾಷ್ಟ್ರ):ಡಿಸೆಂಬರ್ 30, 2018 ರಂದು ಮಹಾರಾಷ್ಟ್ರದ ಥಾಣೆ ಪ್ರದೇಶದ ಉಲ್ಲಾಸ್‌ನಗರ ವ್ಯಾಪ್ತಿಯ ವಡೋಲ್‌ಗಾಂವ್ ಗ್ರಾಮದ ಚರಂಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿತ್ತು. ಅಂದು ಮಗು ಅಳುವ ಕೂಗು ಕೇಳಿದ ಸ್ಥಳೀಯರು ಕೂಡಲೇ ಸಾಮಾಜಿಕ ಕಾರ್ಯಕರ್ತರು ಅಶೋಕ ಫೌಂಡೇಶನ್‌ನ ಶಿವಾಜಿ ರಗಡೆ ಎಂಬುವರಿಗೆ ಮಾಹಿತಿ ನೀಡಿ, ಚರಂಡಿಯಿಂದ ಶಿಶುವನ್ನು ಹೊರತೆಗೆದಿದ್ದರು. ತಲೆ ಸೋಂಕಿನಿಂದ ಬಳಲುತ್ತಿದ್ದ ಗಂಡು ಮಗು ಸಾವನ್ನು ಧಿಕ್ಕರಿಸಿ ಬದುಕುಳಿದಿದ್ದರಿಂದ 'ಟೈಗರ್' ಎಂದು ನಾಮಕರಣ ಮಾಡಲಾಗಿತ್ತು. ಇದೀಗ ಇಟಲಿ ದಂಪತಿ ಪುಟ್ಟ ಕಂದನನ್ನು ದತ್ತು ಪಡೆಯುವ ಮೂಲಕ ನೆಲೆ ಒದಗಿಸಿದ್ದಾರೆ.
ನಿಧಿ ಸಂಗ್ರಹಿಸಿ ಶಸ್ತ್ರಚಿಕಿತ್ಸೆ: 2018ರಲ್ಲಿ ಚರಂಡಿಯಲ್ಲಿ ಸಿಕ್ಕ ಮಗುವನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅಶೋಕ ಫೌಂಡೇಶನ್ ಚಿಕಿತ್ಸಾ ವೆಚ್ಚ ನೋಡಿಕೊಂಡಿತ್ತು. ಆದರೆ ತಲೆಯ ಸೋಂಕು ಗುಣಮುಖವಾಗಿರಲಿಲ್ಲ. ಹಾಗಾಗಿ, ಹೆಚ್ಚು ಹಣ ಖರ್ಚಾಗುವುದರಿಂದ ಅಂದಿನ ಶಾಸಕ ಜ್ಯೋತಿ ಕಲಾನಿ ಅವರನ್ನು ಶಿವಾಜಿ ರಗಡೆ ಭೇಟಿ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಬಳಿಕ ಶಾಸಕರು ವಾಡಿಯಾ ಆಸ್ಪತ್ರೆಯನ್ನು ಸಂಪರ್ಕಿಸಿ, ಮಗುವಿನ ಚಿಕಿತ್ಸೆಗೆ ಕೈಲಾದ ಸಹಾಯ ಮಾಡಿದ್ದರು.
ಇದೇ ವೇಳೆ ಹೆಚ್ಚಿನ ಹಣ ಸಂಗ್ರಹಿಸಲು ಶಿವಾಜಿ ರಗಡೆ ಅವರು ಕೆಟೊ ಎಂಬ ಎನ್‌ಜಿಒದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಬಳಿಕ, ವಾಡಿಯಾ ಆಸ್ಪತ್ರೆಯ ಹೆಸರಿನಲ್ಲಿ ಖಾತೆ ತೆರೆದು 24 ಗಂಟೆಗಳಲ್ಲಿ 10.42 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ, ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸುಮಾರು 4 ತಿಂಗಳ ಚಿಕಿತ್ಸೆಯ ನಂತರ ಟೈಗರ್ನನ್ನು ಏಪ್ರಿಲ್ 5, 2019 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಮಹಿಳಾ ಬಾಲಕಲ್ಯಾಣ ಸಮಿತಿಯ ಆದೇಶದಂತೆ ರಗಡೆ ದಂಪತಿ ಹಾಗೂ ಪೊಲೀಸರು ಆತನನ್ನು ನವಿ ಮುಂಬೈನ ನೆರೂಲ್‌ನಲ್ಲಿರುವ ವಿಶ್ವ ಬಾಲಕ ಕೇಂದ್ರಕ್ಕೆ ದಾಖಲಿಸಿದ್ದರು. ಕೋರಿಕೆಯ ಮೇರೆಗೆ ವಾರಕ್ಕೊಮ್ಮೆ ಮಗುವನ್ನು ಭೇಟಿ ಮಾಡಲು ರಗಡೆ ದಂಪತಿಗೆ ಅಧಿಕೃತ ಅನುಮತಿ ನೀಡಲಾಗಿತ್ತು.