ಮುಂಬೈ:ಮಹಾರಾಷ್ಟ್ರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಕ್ರೀಡಾಂಗಣದ ಹೆಸರು 'ನರೇಂದ್ರ ಮೋದಿ', ಯಾವುದೇ ಪಂದ್ಯ ಸೋಲಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ಠಾಕ್ರೆ ಟೀಕೆ! - ಮಹಾರಾಷ್ಟ್ರ ವಿಧಾನಸಭೆ
ಅಹಮದಾಬಾದ್ನಲ್ಲಿರುವ ಮೊಟೆರೊ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಎಂದು ಮರುನಾಮಕರಣ ಮಾಡಲಾಗಿದ್ದು, ಇದೇ ವಿಚಾರವಾಗಿ ಕೇಂದ್ರದ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
ಅಹಮದಾಬಾದ್ನಲ್ಲಿನ ಮೊಟೆರೊ ಮೈದಾನಕ್ಕೆ ಇದೀಗ ನರೇಂದ್ರ ಮೋದಿ ಹೆಸರಿಡಲಾಗಿದ್ದು, ಇದರ ವಿರುದ್ಧ ಅನೇಕ ಟೀಕೆಗಳು ಕೇಳಿ ಬಂದಿವೆ. ಇದೇ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕ್ರೀಡಾಂಗಣದ ಹೆಸರು ನರೇಂದ್ರ ಮೋದಿ ಎಂದಿಡಲಾಗಿದೆ, ಇನ್ಮುಂದೆ ಅಲ್ಲಿ ಯಾವುದೇ ಪಂದ್ಯ ಸೋಲಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನೀವು ಸರ್ದಾರ್ ವಲ್ಲಭ್ಭಾಯ್ ಅವರ ಹೆಸರು ತೆಗೆದುಹಾಕುತ್ತೀರಿ, ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಡಿ. ಆದರೆ ನಮಗೆ ಮಾತ್ರ ಹಿಂದುತ್ವ ಕಲಿಸಲು ಪ್ರಯತ್ನಿಸಿ ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ ಠಾಕ್ರೆ, ನಿಮ್ಮಿಂದ ನಾವು ಹಿಂದುತ್ವ ಕಲಿಯುವ ಅಗತ್ಯವಿಲ್ಲ ಎಂದಿದ್ದಾರೆ. ಶಿವಸೇನೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ. ಆದರೆ ನಿಮ್ಮ ಮೂಲ ಸಂಸ್ಥೆ ಆರ್ಎಸ್ಎಸ್ ಕೂಡ ಆಗಿರಲಿಲ್ಲ ಎಂಬುದು ನೆನಪಿನಲ್ಲಿಡಿ. ಕೇವಲ ಭಾರತ್ ಮಾತಾ ಕೀ ಜೈ ಎಂದು ಜಪ ಮಾಡುವುದರಿಂದ ಬಿಜೆಪಿ ದೇಶಭಕ್ತ ಆಗಲು ಸಾಧ್ಯವಿಲ್ಲ ಎಂದು ಇದೇ ವೇಳೆ ತಿರುಗೇಟು ನೀಡಿದರು.