ಶ್ರೀನಗರ: ಇಲ್ಲಿನ ಪುಲ್ವಾಮಾ ಜಿಲ್ಲೆಯಲ್ಲಿ ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿದ ಉಗ್ರರು ಅವರನ್ನು ಹತ್ಯೆ ಮಾಡಿದ್ದಾರೆ. ಘಟನೆ ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ನಡೆದಿದೆ. ಮೃತರನ್ನು ಸಂಜಯ್ ಶರ್ಮಾ (ಅಂದಾಜು 40 ವರ್ಷದ ಪ್ರಾಯ) ಎಂದು ಗುರುತಿಸಲಾಗಿದೆ.
ದಕ್ಷಿಣ ಕಾಶ್ಮೀರದ ಅಚನ್ ನಿವಾಸಿಯಾದ ಸಂಜಯ್ ಶರ್ಮಾ ಅವರು ಬ್ಯಾಂಕ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಕೆಲವು ಅಪರಿಚಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪುಲ್ವಾಮಾ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ನಂತರ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಚನ್ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಗ್ರರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಓರ್ವ ಕಾಶ್ಮೀರಿ ಪಂಡಿತಗೆ ಗುಂಡಿಕ್ಕಿ ಕೊಲೆ ಮಾಡಿದ ಉಗ್ರರು
ಈ ಹಿಂದಿನ ಹತ್ಯೆಗಳು..: 2022ರ ಅಕ್ಟೋಬರ್‌ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಹಣ್ಣಿನ ತೋಟಕ್ಕೆ ಹೋಗುತ್ತಿದ್ದ ಕಾಶ್ಮೀರಿ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಕೃಷಿಕರಾಗಿದ್ದ ಪುರಾನ್ ಕ್ರಿಶನ್ ಭಟ್ ಹತ್ಯೆಯಾಗಿದ್ದರು. ಬಳಿಕ ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಕಾಶ್ಮೀರ ಕಣಿವೆ ಸೇರಿದಂತೆ ಜಮ್ಮುವಿನ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ಮಾಡಿ, ಆಕ್ರೋಶ ಹೊರ ಹಾಕುವ ಮೂಲಕ ಕಾಶ್ಮೀರದಿಂದ ಪಂಡಿತರನ್ನು ಜಮ್ಮುವಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ:ಪುಲ್ವಾಮ: ಗುಂಡು ಹಾರಿಸಿ ಕಾಶ್ಮೀರಿ ಪಂಡಿತನ ಹತ್ಯೆಗೈದ ಉಗ್ರರು!
ಇದಾದ ಬಳಿಕ ಅದೇ ಜಿಲ್ಲೆಯ ಮತ್ತೊಬ್ಬ ಕಾಶ್ಮೀರಿ ಪಂಡಿತ ಸುನೀಲ್ ಪಂಡಿತ್ ಎಂಬಾತನನ್ನು ಸಹ ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದರು. ಹತ್ಯೆಗೀಡಾದ ಸುನೀಲ್ ಪಂಡಿತ್ ಅವರ ಪತ್ನಿ ಸುನೀತಾ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನಿನ್ನೆ ನೇಮಕಾತಿ ಪತ್ರ ನೀಡಿದ್ದು, ಅವರು ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಕಳೆದ ವರ್ಷ ನಡೆದ ಪ್ರತ್ಯೇಕ ಸೇನಾ ದಾಳಿಯಲ್ಲಿ ಸುಮಾರು ಆರು ಮಂದಿ ಕಾಶ್ಮೀರಿ ಪಂಡಿತರು ಸಾವನ್ನಪ್ಪಿದ್ದರು.
ಇದನ್ನೂ ಓದಿ:ಉದ್ದೇಶಿತ ಹತ್ಯೆ: ಸುರಕ್ಷಿತ ಸ್ಥಳಗಳಿಗೆ 177 ಕಾಶ್ಮೀರಿ ಪಂಡಿತ ಶಿಕ್ಷಕರ ವರ್ಗಾವಣೆ